'ಮತದಾನ’ ಪದ ಬಳಕೆ ನಿಷೇಧಿಸಿ, ಮತ ಕರ್ತವ್ಯ ಎಂದು ಹೆಸರಿಡಬೇಕು: ಆಂಬ್ರೋಸ್ ಡಿ’ಮೆಲ್ಲೋ

Update: 2018-05-05 16:21 GMT

ಬೆಂಗಳೂರು, ಮೇ 5: ಪ್ರಜಾಧಿಕಾರದ ಆಡಳಿತ ವ್ಯವಸ್ಥೆಯಲ್ಲಿ ‘ಮತದಾನ’ ಪದ ಬಳಕೆ ನಿಷೇಧಿಸಿ, ಮತ ಕರ್ತವ್ಯ ಎಂದು ಹೆಸರಿಸಬೇಕು ಎಂದು ಹೋರಾಟಗಾರ ಮೌನಿ ಆಂಬ್ರೋಸ್ ಡಿ’ಮೆಲ್ಲೋ ಒತ್ತಾಯಿಸಿದ್ದಾರೆ.

ಶನಿವಾರ ನಗರದ ಶೇಷಾದ್ರಿಪುರಂ ರಸ್ತೆಯ ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿ ಮುಂಭಾಗ ಮತದಾನ ಪದ ಬಳಕೆ ನಿಷೇಧಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ ನಡೆಸಿದ ಅವರು, ದಾನ ಅಸಮಾನತೆಯ ಪ್ರತೀಕವಾಗಿದ್ದರೆ ಮತ ಸಮಾನತೆಯ ಹಕ್ಕಾಗಿದೆ. ಪ್ರತಿನಿಧಿಗಳಿಗೆ ವರ್ಗಾಯಿಸಿ ನಿರ್ದಿಷ್ಟ ಅವಧಿಯ ನಂತರ ಹಿಂಪಡೆವಂತದ್ದು ಎಂದು ಹೇಳಿದರು.

ಮತದಾನ ಎಂದು ಹೇಳುವುದು ಸರಿಯಲ್ಲ. ಬದಲಾಗಿ ಮತ ಕರ್ತವ್ಯ, ಮತ ಹಕ್ಕು, ಇಲ್ಲವೇ ಮತ ವರ್ಗಾವಣೆ ಎಂದು ಹೆಸರಿಸಲು ಚುನಾವಣೆ ಆಯೋಗ ಮುಂದಾಗಬೇಕು ಎಂದ ಅವರು, ಪ್ರಜಾತಾಂತ್ರಿಕ ವ್ಯವಸ್ಥೆಯ ಮತಹಕ್ಕಿಗೂ ಅನಾದಿ ಕಾಲದ ರಾಜರ ವಂಶಾಡಳಿತದಲ್ಲಿನ ಕನ್ಯಾದಾನ, ವೀರ್ಯದಾನ, ಗೋದಾನ, ಭೂದಾನ, ವಿದ್ಯಾದಾನಗಳಿಗೂ ವ್ಯತ್ಯಾಸವಿಲ್ಲವೇ ಎಂದು ಪ್ರಶ್ನೆ ಮಾಡಿದರು.

ದಾನ ಎಂಬುವುದರಲ್ಲಿ ಕೊಡುವವರು ಶ್ರಮಿಕರನ್ನು ದೋಚುವವರಾಗಿಯು ಪಡೆಯುವವರು ಶೋಷಿತರಾಗಿಯು ಕಂಡು ಬರುವುದನ್ನು ನಾವು ನೋಡಿಲ್ಲವೇ? ಹಕ್ಕು-ದಾನ ಎಂಬ ಎರಡೂ ಪದಗಳಲ್ಲಿ ತಾತ್ವಿಕ ಹಾಗೂ ರಾಜಕೀಯ ಬದಲಾವಣೆಗಳು ಇವೆ. ಈ ಬಗ್ಗೆ ಚುನಾವಣೆ ಆಯೋಗವೇ ಜಾಗೃತಿ ಮೂಡಿಸಬೇಕಿತ್ತು ಎಂದು ಆಂಬ್ರೋಸ್ ನುಡಿದರು.

ಚುನಾವಣಾ ಆಯೋಗದ ನಿರಂತರ ಪ್ರಯತ್ನದಿಂದಲೇ ನಾವು ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕೆಲ ಅಭ್ಯರ್ಥಿಗಳು ಚುನಾವಣೆಯನ್ನು ಜೂಜಾಟವನ್ನಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹೂಡಿ ಧಾರ್ಮಿಕ ಅಂಧಕಾರ ಹಿಂಸೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮನವಿ: ಮತದಾನ ಪದವನ್ನು ಚುನಾವಣೆ ಪ್ರಕ್ರಿಯೆಯಲ್ಲಿ ನಿಷೇಧಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಚುನಾವಣಾಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News