ಚುನಾವಣಾ ಸಿಬ್ಬಂದಿಗೆ ಆರೋಗ್ಯ ಸೌಲಭ್ಯ: ನಗದು ರಹಿತ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕ್ರಮ

Update: 2018-05-05 16:25 GMT

ಬೆಂಗಳೂರು: ಮೇ 5: ಮತದಾನದ ದಿನದಂದು ಇಲ್ಲವೇ ಮತ ಎಣಿಕೆ ದಿನದಂದು (ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್) ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಯು ತುರ್ತು ಚಿಕಿತ್ಸೆಯನ್ನು ಸರಕಾರಿ ಇಲ್ಲವೆ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮತದಾನ ಮತ್ತು ಮತ ಎಣಿಕೆ ದಿನದಂದು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗೆ ತುರ್ತು ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ತಕ್ಷಣವೇ ಹತ್ತಿರದಲ್ಲಿರುವ ಆರೋಗ್ಯ ಕೇಂದ್ರ ಇಲ್ಲವೇ ಆಸ್ಪತ್ರೆಗೆ ದಾಖಲಿಸಿದಲ್ಲಿ, ಅಲ್ಲಿ ನೀಡುವ ಚಿಕಿತ್ಸೆಯು ನಗದು ರಹಿತವಾಗಿರಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಒಂದು ಪಕ್ಷ ಹತ್ತಿರದಲ್ಲಿ ಸರಕಾರಿ ಆಸ್ಪತ್ರೆಗಳು ಲಭ್ಯವಿರದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯೂ ಸಹ ನಗದು ರಹಿತವಾಗಿ ಚಿಕಿತ್ಸೆಯನ್ನು ನೀಡಬೇಕಾಗಿರುತ್ತದೆ. ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಪಡೆದುಕೊಳ್ಳುವ ನಗದು ರಹಿತ ತುರ್ತು ಚಿಕಿತ್ಸಾ ಇಲ್ಲವೇ ಸಾಮಾನ್ಯ ಚಿಕಿತ್ಸಾ ವೆಚ್ಚದ ಬಿಲ್ಗಳನ್ನು ಸಂಬಂಧಿಸಿದ ಆಸ್ಪತ್ರೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಬೇಕು. ಇಲ್ಲಿಂದ ಸಂಬಂಧಿಸಿದ ಆಸ್ಪತ್ರೆಗೆ ಹಣ ಪಾವತಿಯಾಗಲಿದೆ.

ವಿಧಾನಸಭಾ ಚುನಾವಣೆಯ ಅಂಗವಾಗಿ ರಾಜ್ಯದಲ್ಲಿ ಉಳಿದುಕೊಂಡಿರುವ ಕೇಂದ್ರ ರಕ್ಷಣಾ ಸಿಬ್ಬಂದಿಗೂ ಸಹ ತುರ್ತು ಇಲ್ಲವೆ ಸಾಮಾನ್ಯ ಚಿಕಿತ್ಸೆಯನ್ನು ನಗದು ರಹಿತವಾಗಿ ನೀಡಬೇಕಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News