ಬೆಂಗಳೂರು: ಮೇ 8ರಂದು ವಿಶ್ವ ರೆಡ್‌ಕ್ರಾಸ್ ದಿನಾಚರಣೆ

Update: 2018-05-05 16:28 GMT

ಬೆಂಗಳೂರು, ಮೇ 5: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಮೇ 8 ರಂದು ರೇಸ್‌ಕೋರ್ಸ್ ರಸ್ತೆಯ ಸಂಸ್ಥೆಯ ಆವರಣದ ಜೀನ್ ಹೆನ್ರಿ ಡ್ಯೂನಾಂಟ್ ಸಭಾಂಗಣದಲ್ಲಿ ‘ವಿಶ್ವ ರೆಡ್‌ಕ್ರಾಸ್ ದಿನಾಚರಣೆ’ ಏರ್ಪಡಿಸಿದೆ.

ಶನಿವಾರ ನಗರದ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪ್ರತಿವರ್ಷ ಕಾರ್ಯಕ್ರಮ ಆರೋಜಿಸುತ್ತಾ ಬರುತ್ತಿದೆ. ಹಾಗೇ ಪ್ರತಿವರ್ಷ ಒಂದೊಂದು ಘೋಷಣೆ ಬಿಡುಗಡೆ ಮಾಡುತ್ತಿದ್ದು, 2018ರಲ್ಲಿ ‘ಎಲ್ಲೆಡೆ ಎಲ್ಲರಿಗಾಗಿ ಸದಾನಗು’ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್)ನ ಪ್ರಧಾನ ವ್ಯವಸ್ಥಾಪಕ ಕೆ.ಎಂ.ಶಿವಕುಮಾರನ್ ಉದ್ಘಾಟಿಸಲಿದ್ದಾರೆ. ಬಸ್ರೂರ್ ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎನ್.ಆರ್.ಶೆಟ್ಟಿ, ಅಪ್ಪಾರಾವ್ ಅಕ್ಕೋಣೆ, ಮೀರಾ ಶಿವಲಿಂಗಯ್ಯ, ಅಶೋಕ್ ಕುಮಾರ್ ಶೆಟ್ಟಿ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಸಂಸ್ಥೆಯಲ್ಲಿ ಬಿಪಿಎಲ್ ಕಾರ್ಡ್ ಉಳ್ಳವರಿಗೆ ಕ್ಯಾನ್ಸರ್, ಥ್ಯಾಲಸೀಮಿಯಾ, ಹೀಮೊಫಿಲಿಯಾ ಮುಂತಾದ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಯಾವುದೇ ಪರೀಕ್ಷಾ ಶುಲ್ಕ ಪಡೆಯದೇ ಉಚಿತವಾಗಿ ರಕ್ತ ನೀಡಲಾಗುವುದು. ಅಲ್ಲದೇ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಸರಕಾರ ನಿಗದಿಪಡಿಸಿದ ಪರೀಕ್ಷಾ ಶುಲ್ಕದಲ್ಲೇ ಚಿಕಿತ್ಸೆ ಹಾಗೂ ರಕ್ತ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.

ನಗರದ ಸಿರಸಿ ವೃತ್ತದಲ್ಲಿರುವ ಬಿಬಿಎಂಪಿ ಆಸ್ಪತ್ರೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕ್ಷಯರೋಗಿಗಳಿಗೆ ಚಿಕಿತ್ಸಾ ಸೌಲಭ್ಯಕ್ಕೆ ನೆರವು ನೀಡಲು ಸ್ವಯಂ ಸೇವಕರಿಗೆ ಸರ್ವ ಮತ್ತು ಬೋಕಾ ಎಂಬ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ಅಶೋಕ್‌ಕುಮಾರ್ ಶೆಟ್ಟಿ, ದಿಲೀಪ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News