ಎಸೆಸೆಲ್ಸಿ ಫಲಿತಾಂಶ: ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ

Update: 2018-05-07 12:40 GMT

ಬೆಂಗಳೂರು, ಮೇ 7: ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸುವ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಸ್ತುತ ಸಾಲಿನಲ್ಲಿ ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಶೇಕಡಾವಾರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಸೋಮವಾರ ಫಲಿತಾಂಶ ಪ್ರಕಟಿಸಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, 2017-2018ನೇ ಸಾಲಿನಲ್ಲಿ ಶೇ.71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಈ ಬಾರಿ ಒಟ್ಟು ಫಲಿತಾಂಶದಲ್ಲಿ ಶೇ.4.06 ಏರಿಕೆಯಾಗಿದೆ. ಅದೇ ರೀತಿ, ಉಡುಪಿ ಜಿಲ್ಲೆ(ಶೇ.88.18) ಪ್ರಥಮ ಸ್ಥಾನ ಪಡೆದರೆ, ಉತ್ತರ ಕನ್ನಡ (ಶೇ.88.12) ದ್ವಿತೀಯ ಸ್ಥಾನ ಹಾಗೂ ಚಿಕ್ಕೋಡಿ (ಶೇ.87.01) ತೃತೀಯ ಸ್ಥಾನ ಪಡೆದಿದೆ. ಅದೇ ರೀತಿ, ಯಾದಗಿರಿ(ಶೇ.33.54) ಕೊನೆಯ ಸ್ಥಾನ ಪಡೆದಿದ್ದು, 1,342 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ ಎಂದರು.

ಮೇಲುಗೈ: ಎಸೆಸೆಲ್ಸಿ ಪರೀಕ್ಷೆಯಲ್ಲಿ ನಗರ ಪ್ರದೇಶದಿಂದ 3,76,191 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 2,60,998(ಶೇ.69.38) ಉತ್ತೀರ್ಣರಾಗಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಿಂದ ಒಟ್ಟು 4,61,897 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 3,41,804 (ಶೇ.74) ವಿದ್ಯಾರ್ಥಿಗಳು ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ಪರೀಕ್ಷೆಗೆ ಒಟ್ಟು 8,38,088 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 6,02,802 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರಕಾರಿ ಶಾಲೆಗಳಿಂದ 2,85,594 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ, 2,14,545 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳ 2,08,227 ವಿದ್ಯಾರ್ಥಿಗಳ ಪೈಕಿ 1,58,819 ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ 2,50,650 ವಿದ್ಯಾರ್ಥಿಗಳ ಪೈಕಿ 2,08,154 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಪೈಕಿ 4,45,402 ಪರೀಕ್ಷೆಗೆ ಹಾಜರಾಗಿದ್ದರೆ ಇದರಲ್ಲಿ 2,96,475(ಶೇ. 66.56) ಬಾಲಕರು ತೇರ್ಗಡೆಯಾಗಿದ್ದಾರೆ. 3,92,686 ಪರೀಕ್ಷೆ ಬರೆದ ವಿದ್ಯಾರ್ಥಿನಿಯರ ಪೈಕಿ 3,06,327(ಶೇ. 78.01) ಉತ್ತೀರ್ಣರಾಗಿದ್ದಾರೆ.

ಶೂನ್ಯ ಫಲಿತಾಂಶ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 6 ಸರಕಾರಿ ಶಾಲೆಗಳ ಫಲಿತಾಂಶ ಶೂನ್ಯವಾಗಿದ್ದು, 102 ಶಾಲೆಗಳು ಶೇ.100ಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿವೆ. ಅನುದಾನಿತ ಶಾಲೆ ಪೈಕಿ ಎರಡು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದರೆ, 414 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ. ಅನುದಾನ ರಹಿತ ಶಾಲೆಗಳ ಪೈಕಿ 35 ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದರೆ, 826 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ. ಒಟ್ಟಾರೆ ಈ ಬಾರಿ 43 ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದರೆ, 1,342 ಶಾಲೆಗಳು 100ಕ್ಕೆ ನೂರು ಫಲಿತಾಂಶ ಪಡೆದಿವೆ.

ಜಿಲ್ಲಾವಾರ ಫಲಿತಾಂಶ: ಉಡುಪಿ-88.18%, ಉತ್ತರ ಕನ್ನಡ-88.12%, ಚಿಕ್ಕೋಡಿ-87.01%, ಮಂಗಳೂರು-85.56, ಮಧುಗಿರಿ-85.55%, ಬೆಳಗಾವಿ- 84.77%, ಹಾಸನ-84.68%, ಕೋಲಾರ-83.34%, ವಿಜಯಪುರ- 83.23%, ತುಮಕೂರು-82.97%, ಮೈಸೂರು-82.9%, ಬಳ್ಳಾರಿ-82.73, ಧಾರವಾಡ-82.21, ಬೆಂಗಳೂರು ಗ್ರಾಮಾಂತರ-82.17%.

ದಾವಣಗೆರೆ-81.56%, ಚಿತ್ರದುರ್ಗ-80.85%, ರಾಮನಗರ-80.78%, ಕೊಡಗು-80.68%, ಕೊಪ್ಪಳ-80.43%, ಶಿವಮೊಗ್ಗ-78.75%, ಶಿರಸಿ-78.06%, ಬೆಂಗಳೂರು ಉತ್ತರ-77.37%, ಹಾವೇರಿ-76.76%, ಚಾಮರಾಜನಗರ-74.47%, ಬಾಗಲಕೋಟೆ-72.7%, ಚಿಕ್ಕಮಗಳೂರು-72.47%, ಬೆಂಗಳೂರು ದಕ್ಷಿಣ- 72.03%, ಮಂಡ್ಯ-71.57%, ರಾಯಚೂರು-68.89%, ಕಲಬುರ್ಗಿ-68.65%, ಚಿಕ್ಕಬಳ್ಳಾಪುರ-68.2%, ಗದಗ-67.52%, ಬೀದರ್-60.71%, ಯಾದಗಿರಿ-35.57%.

ಎಸೆಸೆಲ್ಸಿ-ಎಸ್‌ಎಂಎಸ್
ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಎಸೆಸೆಲ್ಸಿ ಮಂಡಳಿಯಿಂದಲೇ ಎಸ್‌ಎಂಎಸ್ ಮೂಲಕ ಫಲಿತಾಂಶ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿ ಈ ಪ್ರಯತ್ನ ಮಾಡಲಾಗಿದ್ದು, 6 ಲಕ್ಷ ವಿದ್ಯಾರ್ಥಿಗಳು ಎಸ್‌ಎಂಎಸ್ ಮೂಲಕ ಫಲಿತಾಂಶ ಪಡೆಯಲಿದ್ದಾರೆ.

ನಾಳೆ ಶಾಲೆಯಲ್ಲಿ ಫಲಿತಾಂಶ
ಮೇ.8 ರಂದು ಶಾಲೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟ ಮಾಡಲಿದ್ದು, http://sslc.kar.nic.in ಮತ್ತು http://karresults.nic.in ವೆಬ್‌ಸೈಟ್ ನೋಡಬಹುದಾಗಿದೆ.

ಪೂರ್ಣ ಅಂಕಗಳಿಸಿದ ಇಬ್ಬರು
2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಸದ್ವಿದ್ಯಾ ಹೈಸ್ಕೂಲ್‌ನ ಯಶಸ್ ಎಂ.ಎಸ್ ಹಾಗೂ ಬೆಂಗಳೂರಿನ ಹೋಲಿ ಚೈಲ್ಡ್ ಹೈಸ್ಕೂಲ್‌ನ ಸುದರ್ಶನ್ ಕೆ.ಎಸ್. 625ಕ್ಕೆ 625 ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದಾರೆ.

ಅದೇ ರೀತಿ, ಒಟ್ಟು ಎಂಟು ವಿದ್ಯಾರ್ಥಿಗಳು 624 ಅಂಕ ಹಾಗೂ 12 ವಿದ್ಯಾರ್ಥಿಗಳು 623 ಅಂಕ, 22 ವಿದ್ಯಾರ್ಥಿಗಳು 622 ಅಂಕ ಹಾಗೂ 35 ವಿದ್ಯಾರ್ಥಿಗಳು 621 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News