ಜೆಡಿಎಸ್ ನಿಲುವಿಗೆ ಸ್ಪಂದಿಸುವ ಪಕ್ಷದ ಜೊತೆ ಹೊಂದಾಣಿಕೆ: ಕುಮಾರಸ್ವಾಮಿ

Update: 2018-05-07 12:55 GMT

ಬೆಂಗಳೂರು, ಮೇ 7: ರಾಜ್ಯ ವಿಧಾನಸಭೆ ಚುನಾವಣೆ ನಂತರ ಅತಂತ್ರ ಪರಿಸ್ಥಿತಿ ನಿರ್ಮಾಣವಾದಲ್ಲಿ ಜೆಡಿಎಸ್ ನಿಲುವಿಗೆ ಸ್ಪಂದಿಸುವವರಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ನಗರದ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದದಲ್ಲಿ ಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಅವರು, ಜೆಡಿಎಸ್ ಪಕ್ಷ 6 ಕೋಟಿ ಜನರ ಪರವಾಗಿದ್ದು ಮುಖ್ಯಮಂತ್ರಿ ಪಟ್ಟಕ್ಕಾಗಿ ಯಾವುದೇ ರಾಷ್ಟ್ರೀಯ ಪಕ್ಷದ ಬಾಗಿಲು ತಟ್ಟುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ. ಒಂದು ವೇಳೆ ನಮ್ಮ ಪಕ್ಷದ ಪ್ರಣಾಳಿಕೆಗಳನ್ನು ಒಪ್ಪಿದರೆ ಬೆಂಬಲ ಸೂಚಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ಕೆಲ ಹೋರಾಟಗಾರರು ಮತ್ತು ಸಾಹಿತಿಗಳು ಬಿಜೆಪಿ ಜೊತೆ ಕೈಜೋಡಿಸಬೇಡಿ ಕಾಂಗ್ರೆಸ್ ಜೊತೆ ಇರಬೇಕೆಂದು ವಿನಂತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಅವಕಾಶವಾದಿಗಳು. ಭ್ರಷ್ಟಾಚಾರಿಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿಯೇ ಲೋಕಾಯುಕ್ತ ಸಂಸ್ಥೆಯ ಕತ್ತು ಹಿಸುಕಿವೆ. ಅಧಿಕಾರದ ಆಸೆಗಾಗಿ ಯಾವುದೇ ರಾಷ್ಟ್ರೀಯ ಪಕ್ಷಗಳ ಬಾಗಿಲು ತಟ್ಟುವುದಿಲ್ಲ. ಇದು ನಮ್ಮ ಪಕ್ಷದ ಬದ್ಧತೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳು ನಡೆಸಿರುವ ವಿಧಾನಸಭಾ ಚುನಾವಣೆ ಸಮೀಕ್ಷೆ ಊಹಾಪೋಹ. ತಮ್ಮಿಷ್ಟದಂತೆ ಅಂಕಿ ಸಂಖ್ಯೆಗಳನ್ನು ನೀಡಿವೆ. ರಾಜ್ಯದ ಜನತೆಗೆ ಜೆಡಿಎಸ್ ಪರ ಒಲವಿದೆ. ರಾಷ್ಟ್ರೀಯ ಪಕ್ಷಗಳ ಬೆಂಬಲವಿಲ್ಲದೆಯೇ ಸರಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಪಡೆಯುವುದರಿಂದ ಯಾರ ಜೊತೆಗೂ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಒಂದು ವೇಳೆ ಮಾಧ್ಯಮಗಳ ಸಮೀಕ್ಷೆಯ ಲೆಕ್ಕಾಚಾರದಂತೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೆ, ಮುಖ್ಯಮಂತ್ರಿ ಪಟ್ಟಕ್ಕಾಗಿ ಯಾವ ಪಕ್ಷದ ಬಾಗಿಲು ತಟ್ಟುವುದಿಲ್ಲ. ನಮ್ಮ ಪಕ್ಷದ ನಿಲುವುಗಳಿಗೆ ಆದ್ಯತೆ ನೀಡುವವರಿಗೆ ಬೆಂಬಲ ಸೂಚಿಸಲಾಗುತ್ತದೆ ಎಂದು ತಿಳಿಸಿದರು.

ಬಿಲ್ ಪಾವತಿ, ಗುತ್ತಿಗೆ ನೀಡುವುದಕ್ಕೆ ಪರ್ಸಂಟೇಜ್ ಅಂತ ಫಿಕ್ಸ್ ಮಾಡಿದ್ದೇ ಬಿಜೆಪಿ ಸರಕಾರ. ಅದನ್ನು ಕಾಂಗ್ರೆಸ್ ಮುಂದುವರಿಸಿಕೊಂಡು ಹೋಗಿದೆ. ಬಿಜೆಪಿಯವರು ಚೆಕ್ ರೂಪದಲ್ಲಿ ಪಡೆದರೆ, ಕಾಂಗ್ರೆಸ್‌ನವರು ಕ್ಯಾಶ್ ರೂಪದಲ್ಲಿ ಪಡೆದಿರುವುದಷ್ಟೆ ಎರಡು ಪಕ್ಷಗಳ ನಡುವಿನ ವ್ಯತ್ಯಾಸ. ಪ್ರಧಾನಿ ಮೋದಿಯವರು ಇದನ್ನೆಲ್ಲ ತಿಳಿದು ಮಾತನಾಡಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದರು.

ಸಾಲ ಹೊರಿಸಿದ ಸರಕಾರ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ 83 ಲಕ್ಷ ಕೋಟಿ ರೂ. ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 1.50 ಕೋಟಿ ರೂ. ಸಾಲ ಮಾಡಿ ಯೋಜನೆಗಳನ್ನು ಜಾರಿಗೆ ತಂದಿವೆ. ಜೊತೆಗೆ ಎರಡೂ ಸರಕಾರಗಳು ಜನರ ತೆರಿಗೆ ಹಣವನ್ನು ಲೂಟಿ ಮಾಡಿವೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಅವರಪ್ಪನಾಣೆ ಎಂಎಲ್‌ಎ ಆಗಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯನವರ ಭಾಷೆಯಲ್ಲಿಯೇ ಹೇಳಬೇಕೆಂದರೆ ಅವರಪ್ಪನಾಣೆಗೂ ಸಿದ್ದರಾಮಯ್ಯ ಎಂಎಲ್‌ಎ ಆಗುವುದಿಲ್ಲ.
-
ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News