ಪ್ರಧಾನಿ ಮೋದಿ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ: ವಿ.ಎಸ್ ಉಗ್ರಪ್ಪ

Update: 2018-05-07 13:48 GMT

ಬೆಂಗಳೂರು, ಮೇ 7: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ‘ಸೀದಾ ರೂಪಯ್ಯ ಸರಕಾರ್’ ಎಂದು ಹೀಯಾಳಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಮೇಲ್ಮನೆ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ವಿ.ಎಸ್.ಉಗ್ರಪ್ಪ ಎಚ್ಚರಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು. ‘ಸೀದಾ ರೂಪಯ್ಯ ಸರಕಾರ್ ಹಾಗೂ ಶೇ.10ರಷ್ಟು ಕಮಿಷನ್ ಸರಕಾರ’ ಎಂದು ಟೀಕಿಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾನಹಾನಿಯಾಗಿದೆ. ಹೀಗಾಗಿ 100 ಕೋಟಿ ರೂ.ಪರಿಹಾರ ಕೋರಿ ನೋಟಿಸ್ ನೀಡಲಾಗಿದೆ ಎಂದು ಉಗ್ರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಉನ್ನತ ಪದವಿಯಲ್ಲಿದ್ದು, ಅವರಿಂದ ಅತ್ಯಂತ ಕೀಳುಮಟ್ಟದ ಪದ ಬಳಕೆ ಮಾಡಲಾಗಿದೆ. ಹೀಗಾಗಿ ನನ್ನ ಕಕ್ಷಿದಾರ ಸಿದ್ದರಾಮಯ್ಯನವರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆಂದು ಉಗ್ರಪ್ಪ ಟೀಕಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗಿಸುವ ವೇಳೆ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸೀದಾ ರೂಪಯ್ಯ ಸರಕಾರ್, ವಾಚ್ ಪ್ರಕರಣಗಳನ್ನು ಬಳಸಿಕೊಂಡು ಜಾಹೀರಾತು ನೀಡಿ ತೇಜೋವಧೆ ಮಾಡಿದ್ದಾರೆ. ಹೀಗಾಗಿ ಇಂದು ಬೆಳಗ್ಗೆಯೇ ಮೋದಿಗೆ ಲೀಗಲ್ ನೋಟಿಸ್ ನೀಡಿದ್ದೇವೆ ಎಂದರು.

ಪ್ರಧಾನಿ ಮೋದಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ಕೋರ್ಟ್‌ನಲ್ಲಿ ಸಿವಿಲ್, ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. 100 ಕೋಟಿ ರೂ.ಪರಿಹಾರ ಕೋರಿ ಮೊಕದ್ದಮೆ ದಾಖಲಿಸುತ್ತೇವೆ ಎಂದು ಉಗ್ರಪ್ಪ ತಿಳಿಸಿದರು.

ನಾವು ಇನ್ನೂ 14 ದಿನಗಳು ಕಾದು ನೋಡುತ್ತೇವೆ. ಜಾರಿ ಮಾಡಿರುವ ನೋಟಿಸ್ ಅವಧಿ ಮುಕ್ತಾಯದ ಬಳಿಕ ಪ್ರಕರಣ ದಾಖಲಿಸುತ್ತೇವೆ. ಪ್ರಧಾನಿ ಮೋದಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸಲು ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಉಗ್ರಪ್ಪ ಪ್ರಶ್ನೆಯೊಂದಕ್ಕೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News