ನಮಾಝ್ ಹೇಳಿಕೆಯ ಬಗ್ಗೆ ಸಮಜಾಯಿಷಿ ನೀಡಿದ ಖಟ್ಟರ್ ಸಚಿವನಿಂದ ಮತ್ತೆ ಪೇಚಿಗೆ

Update: 2018-05-07 14:53 GMT
ಅನಿಲ್ ವಿಜ್

ಚಂಡಿಗಡ,ಮೇ 7: ನಮಾಝ್‌ನ್ನು ಮಸೀದಿಗಳು ಮತ್ತು ಈದ್ಗಾಗಳಲ್ಲಿ ಮಾತ್ರ ಮಾಡಬೇಕು ಎಂಬ ತನ್ನ ಹೇಳಿಕೆಗೆ ಇಲ್ಲಿ ಸಮಜಾಯಿಷಿ ನೀಡಿದ ಹರ್ಯಾಣ ಮಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು,ನಮಾಝ್ ಮಾಡುವದರಿಂದ ಯಾರನ್ನಾದರೂ ತಡೆಯುವ ಬಗ್ಗೆ ತಾನು ಮಾತನಾಡಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ಪೊಲೀಸರು ಮತ್ತು ಆಡಳಿತದ ಕರ್ತವ್ಯವಾಗಿದೆ ಎಂದು ಹೇಳಿದರು.

 ಖಟ್ಟರ್ ಅವರ ಈ ವಿವರಣೆಯ ಬೆನ್ನಿಗೇ ಆರೋಗ್ಯ ಸಚಿವ ಅನಿಲ್ ವಿಜ್ ಅವರು ತನ್ನ ನಾಲಿಗೆಯನ್ನು ಹರಿಬಿಟ್ಟು ಮುಖ್ಯಮಂತ್ರಿಗಳನ್ನು ಮತ್ತೆ ಪೇಚಿಗೆ ಸಿಲುಕಿಸಿದ್ದಾರೆ.

ಯಾರಿಗಾದರೂ ನಮಾಝ್ ಮಾಡುವ ಅಗತ್ಯವಿದ್ದರೆ ಹಾಗೆ ಮಾಡಲು ಅವರಿಗೆ ಧಾರ್ಮಿಕ ಸ್ವಾತಂತ್ರವಿದೆ. ಆದರೆ ಭೂ ಕಬಳಿಕೆಯ ಉದ್ದೇಶದೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡುವಂತಿಲ್ಲ. ಸರಕಾರವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಜ್ ಹೇಳಿದರು.

ಎ.4ರಂದು ಗುರ್ಗಾಂವ್‌ನಲ್ಲಿ ಕೆಲವು ಸಂಘಪರಿವಾರದ ಗುಂಪುಗಳು ಶುಕ್ರವಾರದ ನಮಾಝ್‌ಗೆ ಅಡ್ಡಿಯನ್ನುಂಟು ಮಾಡಿದ್ದ ವರದಿಗಳ ಕುರಿತು ಮಾತನಾಡುತ್ತಿದ್ದ ಖಟ್ಟರ್,ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಆ ಗುಂಪುಗಳನ್ನು ಬೆಂಬಲಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದು ಹೆಚ್ಚುತ್ತಿದೆ. ಸಾರ್ವಜನಿಕ ಸ್ಥಳಗಳ ಬದಲು ನಮಾಝ್‌ನ್ನು ಮಸೀದಿಗಳು ಮತ್ತು ಈದ್ಗಾಗಳಲ್ಲಿ ಮಾಡಬೇಕು. ತನ್ನ ಸರಕಾರವು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ,ಆದರೆ ಸ್ಥಳಾಭಾವವಿದ್ದರೆ ನಮಾಝ್‌ನ್ನು ಖಾಸಗಿ ಸ್ಥಳಗಳಲ್ಲಿ,ತಮ್ಮ ಮನೆಗಳಲ್ಲಿ ಮಾಡಬೇಕು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖಟ್ಟರ್ ಹೇಳಿದ್ದರು.

 ಸಂಘಪರಿವಾರದ ಗುಂಪುಗಳು ಗುರ್ಗಾಂವ್‌ನಲ್ಲಿ ಪ್ರತಿ ಶುಕ್ರವಾರ ನಮಾಝ್ ಮಾಡುವ ಕನಿಷ್ಠ ಆರು ಸ್ಥಳಗಳಿಗೆ ತೆರಳಿ ನಮಾಝ್‌ನ್ನು ನಿಲ್ಲಿಸಿದ್ದವು.

ಈ ಬಗ್ಗೆ ಗುರ್ಗಾಂವ್ ಪೊಲೀಸರು ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ,ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಪಡೆಗಳು ನಮಾಝ್ ನಡೆಯುತ್ತಿದ್ದ ಸ್ಥಳಗಳಿಗೆ ತೆರಳಿದ್ದವು ಮತ್ತು ಸಂಭಾವ್ಯ ಹಿಂಸಾಚಾರವನ್ನು ತಡೆದಿದ್ದವು ಎಂದು ಮೂಲಗಳು ತಿಳಿಸಿದವು.

ಕೆಲವು ಜನರು ಮಸೀದಿಗಳೊಂದಿಗೆ ವಿಲೀನಗೊಳಿಸಲು ಭೂ ಕಬಳಿಕೆಯ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿ ಕಳೆದ ಎರಡು ವಾರಗಳಿಂದ ಹಲವಾರು ಬಲಪಂಥೀಯ ಗುಂಪುಗಳು ಗುರ್ಗಾಂವ್‌ನಲ್ಲಿ ಶುಕ್ರವಾರದ ನಮಾಝ್ ನಿಲ್ಲಿಸಲು ಪ್ರಯತ್ನಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News