ವಿಧಾನಸಭಾ ಚುನಾವಣೆ ಹಿನ್ನೆಲೆ: ಅಂಚೆ ಚೀಟಿ, ವಿಶೇಷ ಅಂಚೆ ಲಕೋಟೆ ಬಿಡುಗಡೆ

Update: 2018-05-07 16:27 GMT

ಬೆಂಗಳೂರು, ಮೇ 7: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವತಿಯಿಂದ ಹೊರತಂದಿರುವ ನಾಲ್ಕು ಅಂಚೆ ಚೀಟಿ ಮತ್ತು ವಿಶೇಷ ಅಂಚೆ ಲಕೋಟೆಗಳನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಅವರು ಸೋಮವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.

ಹದಿನೈದನೆಯ ವಿಧಾನಸಭಾ ಚುನಾವಣೆಯ ಅಂಗವಾಗಿ ಬಿಡುಗಡೆ ಮಾಡಲಾದ ವಿಶೇಷ ಅಂಚೆ ಲಕೋಟೆ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂದೇಶಗಳನ್ನು ಮುದ್ರಿಸಲಾಗಿದೆ. ಅಲ್ಲದೆ, ಮತ್ತೊಂದು ವಿಶೇಷ ಅಂಚೆ ಚೀಟಿಯಲ್ಲಿ ನೃತ್ಯ ಮತ್ತು ಯಕ್ಷಗಾನ ಚಿತ್ರದ ಜೊತೆಗೆ ಮೈಸೂರು ಅರಮನೆಯನ್ನು ತೋರಿಸಲಾಗಿದೆ. ಇನ್ನುಳಿದ 3 ಅಂಚೆ ಚೀಟಿಗಳಲ್ಲಿ ವಿಧಾನಸಭಾ ಚುನಾವಣಾ 2018ರ ಆಶಯಗಳನ್ನು ಪ್ರತಿಬಿಂಬಿಸುವ ವರ್ಣಚಿತ್ರಗಳಿಂದ ಕೂಡಿವೆ.

ವಿಶೇಷ ಚೇತನರಿಗೂ ಪತ್ರ: ವಿಧಾನಸಭಾ ಚುನಾವಣೆಯ ಆಶಯ, ಒಳಗೊಳ್ಳುವ ಸುಗಮ ಮತ್ತು ನೈತಿಕ ಚುನಾವಣೆ ಆಗಿದ್ದು, ಇದರ ಆಶಯದಂತೆ ಎಲ್ಲರನ್ನೂ ತಲುಪಲು ಪ್ರಯತ್ನಿಸಲಾಗುತ್ತಿದೆ. ವಿಶೇಷ ಚೇತನರು ಅದರಲ್ಲೂ ದೃಷ್ಟಿ ವಿಕಲಚೇತನರನ್ನು ಗಮನದಲ್ಲಿರಿಸಿಕೊಂಡು, ಅವರಿಗಾಗಿಯೇ ಬ್ರೈಲ್ ಲಿಪಿಯಲ್ಲಿ ಪತ್ರವನ್ನು ಬರೆದು ಅವರುಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದೃಷ್ಟಿ ವಿಕಲಚೇತನರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬ್ರೈಲ್ ಲಿಪಿಯಲ್ಲಿ ಬರೆದ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಲ್‌ನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ಬೆಂಗಳೂರು ಪೂರ್ವ ವಿಭಾಗದ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಆಫೀಸರ್ ಸಂದೇಶ ಮಹದೇವಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News