ಮತದಾನಕ್ಕೆ ಮುನ್ನಾ ದಿನಗಳಲ್ಲಿ ಪಾಲಿಸಬೇಕಾದ ಕ್ರಮದ ಕುರಿತು ನೀತಿ ಸಂಹಿತೆ ಬಿಡುಗಡೆ

Update: 2018-05-07 16:30 GMT

ಬೆಂಗಳೂರು, ಮೇ 7: ಕೇಂದ್ರ ಚುನಾವಣಾ ಆಯೋಗ ಮತದಾನದ ಮುನ್ನಾ ದಿನದ 72 ಗಂಟೆಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಎಂಬುದು ಸೇರಿದಂತೆ ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳು ಪಾಲಿಸಬೇಕಾದ ಮಾದರಿ ನೀತಿ ಸಂಹಿತೆ ಬಿಡುಗಡೆ ಮಾಡಿದೆ.

ಜಾತಿ, ಧರ್ಮಗಳ ಭಾವನೆ ಕೆರಳಿಸುವಂತಹ, ಕೋಮು ಭಾವನೆಗಳನ್ನು ಕೆರಳಿಸುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವಂತಿಲ್ಲ. ಇನ್ನು, ಚುನಾವಣಾ ದಿನದ 48 ಗಂಟೆಗಳ ಮುಂಚೆ ಕಾನೂನು ಬಾಹಿರವಾಗಿ ಗುಂಪು ಸೇರುವುದು, ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ. ಮತಗಟ್ಟೆ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ನೀತಿ ಸಂಹಿತೆಯಲ್ಲಿ ತಿಳಿಸಲಾಗಿದೆ.

ರಾಜಕೀಯ ಪಕ್ಷದ ಪದಾಧಿಕಾರಿಗಳು ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಸ್ಥಳಗಳನ್ನು ಖಚಿತ ಪಡಿಸಬೇಕು. ಅಲ್ಲದೇ ಅವರ ಚಲನವಲನ ಪಕ್ಷದ ಕಚೇರಿ ಹಾಗೂ ವಾಸ್ತವ್ಯ ಹೂಡಿರುವ ಸ್ಥಳಗಳಿಗೆ ಸೀಮಿತವಾಗಿರಬೇಕು. ಹೊರಗಿನಿಂದ ಪ್ರಚಾರಕ್ಕೆ ಬಂದವರು ಕಲ್ಯಾಣಮಂಟಪ, ಸಮುದಾಯ ಭವನ, ಲಾಡ್ಜ್‌ಗಳಲ್ಲಿ ಸ್ಥಳಾವಕಾಶ ನೀಡಲಾಗಿದೆಯೆ ಎಂಬುದನ್ನು ಚುನಾವಣಾಧಿಕಾರಿಗಳು, ಪೋಲೀಸರು ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಿದೆ.

ಪ್ರಚಾರಕ್ಕೆ ಯಾವುದೇ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಹೊರಗಿನ ಕ್ಷೇತ್ರದ ಮತದಾರರು ಪ್ರಚಾರ ಕಾರ್ಯ ಮುಗಿದ ಬಳಿಕ ಮತಗಟ್ಟೆ ಬಳಿ ಇರುವಂತಿಲ್ಲ. ಹೊರಗಿನಿಂದ ಪ್ರಚಾರಕ್ಕೆ ಕರೆತಂದಿರುವವರನ್ನು ಕ್ಷೇತ್ರದಿಂದ ಹೊರಗೆ ಕಳುಹಿಸಿರುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಖಚಿತ ಪಡಿಸಬೇಕೆಂದು ಚುನಾವಣಾ ಆಯೊಗ ನಿರ್ದೇಶನ ಮಾಡಿದೆ.

ಅಬಕಾರಿ ನೀತಿ: ಲೈಸೆನ್ಸ್ ನೀಡದ ಪ್ರದೇಶಗಳಲ್ಲಿ ಮದ್ಯ ದಾಸ್ತಾನು ಮಾಡದಂತೆ ನಿಗಾ ವಹಿಸುವುದರ ಜೊತೆಗೆ ಅಕ್ರಮವಾಗಿ ಮದ್ಯ ತಯಾರಿಸುವ ಕಾರ್ಖಾನೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಬೇಕೆಂದು ಚುನಾವಣಾ ಅಧಿಕಾರಿ ಹಾಗೂ ರಿಟರ್ನಿಂಗ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಚುನಾವಣಾ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ವಾಹನ ಬಳಕೆ: ಮತದಾನದ 24ಗಂಟೆಗಳ ಮುಂಚೆ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಹಾಗೂ ಏಜೆಂಟ್‌ಗೆ ತಲಾ ಒಂದೊಂದು ವಾಹನ ಮಾತ್ರ ಬಳಸಲು ಅವಕಾಶ ನೀಡಲಾಗಿದೆ. ವಾಹನದಲ್ಲಿ ಚಾಲಕ ಸೇರಿದಂತೆ 5ಕ್ಕಿಂತ ಹೆಚ್ಚು ಜನರು ಪ್ರಯಾಣಿಸುವಂತಿಲ್ಲ. ಹಾಗೂ ವಾಹನವನ್ನು ಯಾರಿಗೂ ವರ್ಗಾಯಿಸುವಂತಿಲ್ಲ ಎಂದು ತಿಳಿಸಲಾಗಿದೆ.

ಮತದಾರರನ್ನು ಮತಗಟ್ಟೆಗೆ ಕರೆತರಲು ಯಾವುದೇ ಉಚಿತ ವಾಹನ ಸೌಲಭ್ಯಗಳನ್ನು ಒದಗಿಸುವುದನ್ನು ನಿರ್ಬಂಧಿಸಲಾಗಿದೆ. ಇನ್ನು, ವಾಹನಗಳ ಮಾಲಕರು ವಾಹನಗಳನ್ನು ತಮ್ಮ ಕುಟುಂಬದವರು ಬಳಸಲು ಅವಕಾಶ ನೀಡಿದೆ. ವಿಮಾನ, ರೈಲು, ಬಸ್ ನಿಲ್ದಾಣಕ್ಕೆ ತೆರಳಲು ಟ್ಯಾಕ್ಸಿ, ತ್ರಿಚಕ್ರ ವಾಹನ, ಸ್ಕೂಟರ್ ಬಳಸಬಹುದಾಗಿದೆ.

ಮೊಬೈಲ್ ಬಳಕೆ ನಿಷೇಧ:  ಮತಗಟ್ಟೆ ಪ್ರದೇಶದ 100ಮೀಟರ್ ಆವರಣದಲ್ಲಿ ಸೆಲ್ಯೂಲರ್, ಕಾರ್ಡ್‌ಲೆಸ್ ಫೋನ್‌ಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ಸಹ ಮೊಬೈಲ್‌ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು. ಬಳಸಬೇಕೆಂದರೆ ಮತಗಟ್ಟೆಯಿಂದ 100 ಮೀಟರ್ ಹೊರಗೆ ಹೋಗಿ ಬಳಸಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News