ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದಕ್ಕೆ

Update: 2018-05-09 17:40 GMT

ವಾಶಿಂಗ್ಟನ್, ಮೇ 9: ಇರಾನ್ ಜೊತೆಗಿನ ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯುವುದು ಹಾಗೂ ಆ ದೇಶದ ವಿರುದ್ಧ ಭಾರೀ ಪ್ರಮಾಣದಲ್ಲಿ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ.

‘‘ಅದು ಭಯಾನಕ ಏಕಪಕ್ಷೀಯ ಒಪ್ಪಂದವಾಗಿತ್ತು. ಅದನ್ನು ಯಾವತ್ತೂ ಮಾಡಬಾರದಾಗಿತ್ತು. ಅದು ಶಾಂತಿ ತರಲಿಲ್ಲ, ಅದು ಸಮಾಧಾನ ತರಲಿಲ್ಲ, ಅವುಗಳನ್ನು ಅದು ಯಾವತ್ತೂ ತರುವುದಿಲ್ಲ’’ ಎಂದು ಟ್ರಂಪ್ ಹೇಳಿದರು.

ಅಮೆರಿಕವು ಯಾವತ್ತೂ ಪೊಳ್ಳು ಬೆದರಿಕೆಗಳನ್ನು ಹಾಕುವುದಿಲ್ಲ ಎನ್ನುವುದನ್ನು ತನ್ನ ನಿರ್ಧಾರವು ಸಾಬೀತುಪಡಿಸಿದೆ ಎಂದರು.

ಇರಾನ್‌ನ ಪರಮಾಣು ಶಸ್ತ್ರ ಕಾರ್ಯಕ್ರಮವು 2030ರ ನಂತರವೂ ಮುಂದುವರಿಯುವುದರ ಮೇಲೆ ಖಚಿತ ಮಿತಿಗಳನ್ನು ಹೇರಬೇಕು ಎಂಬುದಾಗಿ ಟ್ರಂಪ್ ಹೇಳುತ್ತಾ ಬಂದಿದ್ದರು. ಇದು ಒಪ್ಪಂದಕ್ಕೆ ಸಂಬಂಧಿಸಿ ಅವರಿಗಿದ್ದ ಪ್ರಮುಖ ಅಸಮಾಧಾನವಾಗಿತ್ತು. ಈ ಬಗ್ಗೆ ನಡೆದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಟ್ರಂಪ್ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮರ ನೇತೃತ್ವದಲ್ಲಿ 2015ರಲ್ಲಿ ಪಶ್ಚಿಮದ ದೇಶಗಳೊಂದಿಗೆ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು. ಅಮೆರಿಕ ಮತ್ತು ಇರಾನ್‌ಗಳ ಹೊರತಾಗಿ, ಫ್ರಾನ್ಸ್, ಚೀನಾ, ಬ್ರಿಟನ್, ರಶ್ಯ ಮತ್ತು ಜರ್ಮನಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು.

ಭಾರತದ ಮೇಲೆ ಏನು ಪರಿಣಾಮ?

ಇರಾನ್ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯ ಮೂರನೇ ಅತಿ ದೊಡ್ಡ ಸದಸ್ಯ ದೇಶವಾಗಿದೆ. ಅದು ಪ್ರತಿ ದಿನ 38 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಹೊರಜಗತ್ತಿಗೆ ಪೂರೈಸುತ್ತಿದೆ. ಅಂದರೆ ಜಾಗತಿಕ ಪೂರೈಕೆಯ ಸುಮಾರು 4 ಶೇಕಡದಷ್ಟನ್ನು ಅದು ಪೂರೈಸುತ್ತದೆ.

ಇರಾನ್‌ನಿಂದ ಹೆಚ್ಚಿನ ಪ್ರಮಾಣದ ತೈಲವನ್ನು ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಗಳು ಖರೀದಿಸುತ್ತವೆ.

ಮೊದಲ ಸುತ್ತಿನ ದಿಗ್ಬಂಧನಗಳ ಮೊದಲು ಇರಾನ್ ಭಾರತದ ಎರಡನೇ ಅತಿ ದೊಡ್ಡ ತೈಲ ಪೂರೈಕೆದಾರ ದೇಶವಾಗಿತ್ತು. 2015ರ ಬಳಿಕ, ಅಂದರೆ ಪರಮಾಣು ಒಪ್ಪಂದ ಅಸ್ತಿತ್ವಕ್ಕೆ ಬಂದ ಬಳಿಕ, ಸೌದಿ ಅರೇಬಿಯ ಮತ್ತು ಇರಾಕ್ ಬಳಿಕ, ಮೂರನೇ ಅತಿ ದೊಡ್ಡ ತೈಲ ಪೂರೈಕೆದಾರನಾಗಿದೆ.

ಇನ್ನು ಈ ಪರಿಸ್ಥಿತಿ ಮತ್ತೊಮ್ಮೆ ಬದಲಾಗುತ್ತಿದೆ. ತೈಲ ಬೆಲೆಯಲ್ಲಿ ಹೆಚ್ಚಳವಾಗಬಹುದಾಗಿದೆ.

ಫ್ರಾನ್ಸ್, ಜರ್ಮನಿ, ಬ್ರಿಟನ್ ನಾಯಕರ ವಿಷಾದ

‘‘ಒಪ್ಪಂದದಿಂದ ಹಿಂದೆ ಸರಿಯುವ ಟ್ರಂಪ್‌ರ ನಿರ್ಧಾರವನ್ನು ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್‌ಗಳ ನಾಯಕರಾದ ನಾವು ವಿಷಾದ ಮತ್ತು ಕಳವಳದಿಂದ ನೋಡುತ್ತಿದ್ದೇವೆ’’ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್, ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಮತ್ತು ಬ್ರಿಟನ್ ಪ್ರಧಾನಿ ತೆರೇಸಾ ಮೇ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಒಪ್ಪಂದದಲ್ಲಿ ಉಳಿಯುತ್ತೇವೆ: ಇರಾನ್

ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವ ಹೊರತಾಗಿಯೂ, ಇರಾನ್ ಒಪ್ಪಂದಕ್ಕೆ ಬದ್ಧವಾಗಿರುವುದು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮಂಗಳವಾರ ಹೇಳಿದ್ದಾರೆ.

‘‘ಒಪ್ಪಂದದಲ್ಲಿರುವ ಇತರ ಸದಸ್ಯರ ಜೊತೆಗೆ ಒಪ್ಪಂದದ ಗುರಿಗಳನ್ನು ಸಾಧಿಸಲು ನಮಗೆ ಸಾಧ್ಯವಾದರೆ, ನಾವು ಒಪ್ಪಂದದಲ್ಲೇ ಇರುತ್ತೇವೆ. ಒಪ್ಪಂದದಿಂದ ಹಿಂದೆ ಸರಿಯುವ ಮೂಲಕ, ತನ್ನ ಅಂತಾರಾಷ್ಟ್ರೀಯ ಬದ್ಧತೆಯನ್ನು ಅಮೆರಿಕ ಕಡೆಗಣಿಸಿದೆ’’ ಎಂದು ಟೆಲಿವಿಶನ್ ಭಾಷಣದಲ್ಲಿ ರೂಹಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News