ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಮ್ಯಾ?

Update: 2018-05-10 04:08 GMT

ಹೊಸದಿಲ್ಲಿ, ಮೇ 10: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಟಿ- ರಾಜಕಾರಣಿ ರಮ್ಯಾ ಹೆಸರು ಬಲವಾಗಿ ಕೇಳಿಬರುತ್ತಿದೆ ಎಂದು ಖ್ಯಾತ ಆಂಗ್ಲ ಸುದ್ದಿತಾಣವೊಂದು ಹೇಳಿದೆ.

ಬಹಿರಂಗವಾಗಿ ಅಲ್ಲದಿದ್ದರೂ, ಪಕ್ಷದಲ್ಲಿ ಆಂತರಿಕವಾಗಿ "ಆಕೆ ಏಕಾಗಬಾರದು?" ಎಂಬ ಪಿಸು ಅಭಿಯಾನ ಬಿರುಸಿನಿಂದ ಸಾಗಿದ್ದು, ಅಂತಿಮವಾಗಿ "ಆಕೆ" ಆಂತರಿಕ ಜಯ ಸಾಧಿಸಿದ್ದಾರೆ ಎನ್ನಲಾಗಿದೆ. ಆಕೆ ಯಾರು ಎನ್ನುವುದು ಸ್ಪಷ್ಟವಾಗಿಲ್ಲವಾದರೂ, ಪಕ್ಷದ ಆಂತರಿಕ ಮೂಲಗಳು ಹೇಳುವಂತೆ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಈ ಹುದ್ದೆಯ ಸಂಭಾವ್ಯ ಆಯ್ಕೆ.

ರಮ್ಯಾ ಈ ಹುದ್ದೆಗೆ ಆಯ್ಕೆಯಾದರೆ, ಅಂಬಿಕಾ ಸೋನಿ ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ಅವರಿಗೆ ಈಗಾಗಲೇ ಅನೌಪಚಾರಿಕ ಬೀಳ್ಕೊಡುಗೆ ನೀಡಲಾಗಿದೆ. ರಾಷ್ಟ್ರನಿರ್ಮಾಣದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದನ್ನು ಇದು ಬಿಂಬಿಸುತ್ತದೆ ಎಂದು ರಾಜಾ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ವಲಯದಲ್ಲಿ ರಾಹುಲ್‌ಗೆ ಆಪ್ತರೆಂದೇ ರಮ್ಯಾ ಬಿಂಬಿಸಲ್ಪಟ್ಟಿದ್ದು, 2017ರ ಮೇ ತಿಂಗಳಲ್ಲಿ ರಾಹುಲ್ ಅವರೇ ಸ್ವತಃ ರಮ್ಯಾ ಅವರನ್ನು ಸಾಮಾಜಿಕ ಜಾಲತಾಣ ತಂಡಕ್ಕೆ ಮತ್ತು ರಾಷ್ಟ್ರೀಯ ಡಿಜಿಟಲ್ ತಂಡಕ್ಕೆ ಮುಖ್ಯಸ್ಥೆಯಾಗಿ ಆಯ್ಕೆ ಮಾಡಿದ್ದರು. ಐದು ತಿಂಗಳ ಒಳಗಾಗಿ ಮಂಡ್ಯ ಸಂಸದೆ ಹಾಗೂ ಅವರ ತಂಡ ಯಶಸ್ವಿಯಾಗಿ, ರಾಹುಲ್ ಅವರ ಇಮೇಜನ್ನು ಕ್ರಿಯಾಶೀಲ ರಾಷ್ಟ್ರೀಯ ನಾಯಕ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿತ್ತು.

ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಅಧಿಕೃತ ಘೋಷಣೆ ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಹೊರಬೀಳುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News