ಭಾರತದಲ್ಲಿ ಪ್ರತೀ 8 ಮಂದಿಯಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ

Update: 2018-05-10 04:55 GMT

ಹೊಸದಿಲ್ಲಿ, ಮೇ 10: ದೇಶದ ಪ್ರತಿ ಎಂಟು ಮಂದಿಯ ಪೈಕಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 2017ರಲ್ಲಿ ದೇಶಾದ್ಯಂತ 100 ಜಿಲ್ಲೆಗಳಲ್ಲಿ 2.25 ಕೋಟಿ ವಯಸ್ಕರ ಆರೋಗ್ಯ ತಪಾಸಣೆ ನಡೆಸಿ ಸಿದ್ಧಪಡಿಸಿದ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2015-16) ಪ್ರಕಾರ ಪ್ರತೀ 11 ಮಂದಿಯ ಪೈಕಿ ಒಬ್ಬರಿಗೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇದೆ ಎಂದು ಹೇಳಲಾಗಿತ್ತು. ಈ ಜೀವನಶೈಲಿ ರೋಗದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಎಂದು ವರದಿ ಸ್ಪಷ್ಟಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಅಮೆರಿಕದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಹಾಗೂ ಇಂಗ್ಲೆಂಡಿನಲ್ಲಿ ಪ್ರತಿ ನಾಲ್ಕು ಮಂದಿಯ ಪೈಕಿ ಒಬ್ಬರು ಹೈಪರ್‌ ಟೆನ್ಷನ್‌ನಿಂದ ಬಳಲುತ್ತಿದ್ದಾರೆ.

ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಅಭಿಯಾನದ ಅಂಗವಾಗಿ ಈ ಸಮೀಕ್ಷೆ ನಡೆಸಲಾಗಿತ್ತು. ಹೈಪರ್‌ ಟೆನ್ಷನ್, ಮಧುಮೇಹ, ಸ್ತನ ಕ್ಯಾನ್ಸರ್, ಓರಲ್ ಕ್ಯಾವಿಟಿ ಮತ್ತಿತರ ರೋಗಗಳ ಬಗ್ಗೆ 30 ವರ್ಷಗಳಿಗೆ ಮೇಲ್ಪಟ್ಟವರ ಆರೋಗ್ಯ ತಪಾಸಣೆ ನಡೆಸಲಾಗಿತ್ತು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅನ್ವಯ ಶೇಕಡ 8.6ರಷ್ಟು ಮಂದಿ (ಶೇಕಡ 10.4 ಪುರುಷರು ಹಾಗೂ 6.7 ಮಹಿಳೆಯರು) ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆಯ ಮಾನದಂಡದ ಪ್ರಕಾರ 140/9- ಎಂಎಂಎಚ್‌ಜಿಯನ್ನು ಅಧಿಕ ರಕ್ತದ ಒತ್ತಡ ಎಂದು ಪರಿಗಣಿಸಲಾಗುತ್ತದೆ. ಆದರೆ ವಿದೇಶಗಳಲ್ಲಿ 130ನ್ನು ಕೂಡಾ ಅಧಿಕ ಒತ್ತಡ ಎಂದು ಪರಿಗಣಿಸಲಾಗುತ್ತದೆ.

ಭಾರತದ ಅಂಕಿ ಅಂಶಗಳ ಬಗ್ಗೆ ಆತಂಕಕಾರಿ ಅಂಶವೆಂದರೆ, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಮುಕ್ತ ಎಂದು ಪರಿಗಣಿಸಲಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಈ ರೋಗ ಪತ್ತೆಯಾಗಿರುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News