ಆರೆಸ್ಸೆಸ್ ಸಿದ್ಧಾಂತ- ಕರ್ನಾಟಕದ ಅಸ್ಮಿತೆ ನಡುವಿನ ಚುನಾವಣೆ: ರಾಹುಲ್ ಗಾಂಧಿ

Update: 2018-05-10 12:24 GMT

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭೆ ಚುನಾವಣೆ ನನ್ನ ಹಾಗೂ ಮೋದಿ ನಡುವಿನ ಚುನಾವಣೆಯಲ್ಲ. ನನ್ನ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯೂ ಇದಲ್ಲ. ಬದಲಿಗೆ ಕರ್ನಾಟಕದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ನಡೆಯುತ್ತಿರುವ ಚುನಾವಣೆ ಇದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಭಾಷೆ, ಸಂಸ್ಕೃತಿ, ಆಹಾರ ಪದ್ದತಿ ಮತ್ತು ಸುಧಾರಕ ಬಸವಣ್ಣನ ತತ್ವದ ಮೇಲೆ ಸವಾರಿ ಮಾಡುವ ಆರೆಸ್ಸೆಸ್ ಸಿದ್ಧಾಂತ ಮತ್ತು ಕರ್ನಾಟಕದ ಅಸ್ಮಿತೆ ನಡುವಿನ ಹೋರಾಟ ಈ ಚುನಾವಣೆ ಎಂದು ವಿಶ್ಲೇಷಿಸಿದರು.

ಕರ್ನಾಟಕದ ಅಸ್ಮಿತೆಯನ್ನು ಉಳಿಸಲು ಕಾಂಗ್ರೆಸ್ ಅಭಿವೃದ್ಧಿ ಆಧರಿಸಿ ಮತ್ತೊಮ್ಮೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿದೆ. ಆದರೆ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ, ನನ್ನ ಮತ್ತು ಸಿಎಂ ಸಿದ್ದರಾಮಯ್ಯರ ವಿರುದ್ಧ ವೈಯಕ್ತಿಕ ದಾಳಿಗೆ ಮುಂದಾಗಿದೆ ಎಂದು ಟೀಕಿಸಿದರು.

ತುಟಿಬಿಚ್ಚದ ಪ್ರಧಾನಿ: ರೋಹಿತ್ ವೇಮುಲಾ ಆತ್ಮಹತ್ಯೆ, ಊನಾ ದೌರ್ಜನ್ಯ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆದರೆ ಪ್ರಧಾನಿ ಮೋದಿ ಒಂದೇ ಒಂದು ಮಾತನಾಡುವುದಿಲ್ಲ. ದಲಿತ-ಅಲ್ಪಸಂಖ್ಯಾತರಿಗೆ ರಕ್ಷಣೆಯೇ ಇಲ್ಲ. ಅವರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆಂದು ವಾಗ್ದಾಳಿ ನಡೆಸಿದರು.

ತಾನು ಪಕ್ಷದ ನಾಯಕನಾಗಿ ಎಲ್ಲ ಧರ್ಮಗಳು ಹಾಗೂ ಎಲ್ಲ ಸಮುದಾಯಗಳನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ. ಯಾರೇ ಕರೆದರೂ ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳು ಹಾಗೂ ಮಠ-ಮಂದಿರಗಳಿಗೆ ಭೇಟಿ ನೀಡುವೆ.ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಎನ್ನುವ ಪಕ್ಷ ನಮ್ಮದಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಣೆ ನೀಡಿದರು.

ಬಿಜೆಪಿಯವರಿಗೆ ‘ಹಿಂದೂ’ ಎಂಬ ಪದದ ಅರ್ಥವೇ ಗೊತ್ತಿಲ್ಲ. ಹೀಗಾಗಿ ಬಿಜೆಪಿ ಮುಖಂಡರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ, ತಾನು ದೇವಸ್ಥಾನ, ಮಠ, ಮಸೀದಿ, ಚರ್ಚ್, ಗುರುದ್ವಾರ ಸೇರಿ ಎಲ್ಲ ಕಡೆ ಹೋಗುತ್ತೇನೆ. ಹಿಂದೂ ಧರ್ಮದ ಬಗ್ಗೆ ನನ್ನದೆ ಆದ ಕಲ್ಪನೆಯನ್ನಿಟ್ಟುಕೊಂಡಿದ್ದೇನೆ ಎಂದು ವಿವರಿಸಿದರು.

ದೇಶಕ್ಕೆ ಕರ್ನಾಟಕದ ಕೊಡುಗೆ ಅನನ್ಯ. ಐಟಿಬಿಟಿ ಕೇಂದ್ರವಾಗಿರುವ ಬೆಂಗಳೂರು ನಮ್ಮ ರಾಷ್ಟ್ರದ ಹೆಮ್ಮೆ. ಮುಂದಿನ ವರ್ಷಗಳಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಲಿದೆ ಎಂದ ಅವರು, ರಾಜ್ಯಾದ್ಯಂತ ಪ್ರವಾಸ ನಡೆಸಿದ್ದು, ಜನರ ಪ್ರೀತಿಗೆ ಆಭಾರಿಯಾಗಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ನೇಹಿತನಿಗಾಗಿ ಡೀಲ್: ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದ ಬಹಳ ಒಳ್ಳೆಯ ಡೀಲ್. ಅದು ಮೋದಿ ತನ್ನ ಸ್ನೇಹಿತನಿಗಾಗಿ ಮಾಡಿದ್ದೇ ಹೊರತು, ದೇಶಕ್ಕಾಗಿ ಅಲ್ಲ. ರಫೆಲ್ ಯುದ್ಧ ವಿಮಾನದ ಟೆಂಡರ್ ಎಚ್‌ಎಎಲ್‌ಗೆ ಸಿಗಬೇಕಿತ್ತು. ಆದರೆ ಅದು ಎಚ್‌ಎಎಲ್ ಕೈ ತಪ್ಪಿದೆ. 45ಸಾವಿರ ಕೋಟಿ ರೂ.ಟೆಂಡರ್ ಬೇರೆಯವರಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ವಿದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಬ್ಯಾರಲ್‌ಗೆ 140 ಡಾಲರ್‌ನಿಂದ 70 ಡಾಲರ್‌ಗೆ ಇಳಿದಿದೆ. ಆದರೆ, ಇದರ ಅನುಕೂಲ ಜನ ಸಾಮಾನ್ಯರಿಗೆ ಆಗುತ್ತಿಲ್ಲ. ಈ ಹಿಂದೆ ಯುಪಿಎ ಅವಧಿಯಲ್ಲಿ ತೈಲೋತ್ಪನ್ನಗಳಿಂದ ಬಂದ ಉಳಿತಾಯದ ಹಣದಲ್ಲಿ ಜನ ಕಲ್ಯಾಣ ಯೋಜನೆ ರೂಪಿಸಲಾಗುತ್ತಿತ್ತು ಎಂದು ಹೇಳಿದರು.

ಚೀನಾ, ಭಾರತದ ಡೋಕ್ಲಮ್ ಪ್ರದೇಶಕ್ಕೆ ಅತಿಕ್ರಮ ಪ್ರವೇಶದ ಬಳಿಕವೂ ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡಿದ್ದರು. ಆದರೂ ಮೋದಿ ಡೋಕ್ಲಾಮ್ ಬಗ್ಗೆ ಮೋದಿ ಒಂದೂ ಮಾತು ಆಡಲಿಲ್ಲ. ನಮ್ಮ ದೇಶದ ವಿದೇಶಿ ನೀತಿ ಹಾದಿತಪ್ಪಿದೆ ಎಂದು ಇದೇ ವೇಳೆ ಟೀಕಿಸಿದರು.

ಮೋದಿ ಮಧ್ಯೆ ಪ್ರವೇಶಿಸಲಿ: ‘ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕ್ರಮ ವಹಿಸಬೇಕು. ರಾಜ್ಯದ ಜನರಿಗೆ ನೀರು ಒದಗಿಸಲು ಮೋದಿ ಮಧ್ಯೆ ಪ್ರವೇಶಿಸಿಬೇಕು’ ಎಂದು ರಾಹುಲ್ ಗಾಂಧಿ ಇದೇ ವೇಳೆ ಆಗ್ರಹಿಸಿದರು.

‘ಕರ್ನಾಟಕ ರಾಜ್ಯದ ಜನತೆ ರಾಜಕೀಯವಾಗಿ ಅತ್ಯಂತ ಪ್ರಬುದ್ಧರಿದ್ದು, ಐದು ವರ್ಷಗಳಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಾಧನೆಗಳು ಹಾಗೂ ರಾಜ್ಯದ ಧ್ವನಿಯಾಗಿರುವ ನೂತನ ಭರವಸೆಗಳ ಪ್ರಣಾಳಿಕೆಯನ್ನು ಜನರ ಮುಂದಿಟಿದ್ದು, ಜನತೆ ಕಾಂಗ್ರೆಸ್ ಬೆಂಬಲಿಸುವುದು ನಿಶ್ಚಿತ’
-ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ

‘ನನ್ನ ತಾಯಿ ನಾನು ಕಂಡ ಎಷ್ಟೋ ಭಾರತೀಯರಿಗಿಂತಲೂ ಭಾರತ ದೇಶದ ಉತ್ತಮ ಪ್ರಜೆ. ನನ್ನ ತಾಯಿ ಇಟಲಿ ಮೂಲದವರು. ಅವರ ಜೀವನ ಬಹುಪಾಲು ಸಮಯವನ್ನು ಭಾರತದಲ್ಲಿ ಕಳೆದಿದ್ದಾರೆ. ದೇಶಕ್ಕಾಗಿ ಆಕೆ ಸಾಕಷ್ಟು ತ್ಯಾಗ ಮಾಡಿದ್ದಾರೆ. ಬಹಳ ನೋವುಂಡಿದ್ದಾರೆ. ನಮ್ಮ ಬಗ್ಗೆ ಮಾತನಾಡುವುದರಿಂದ ಅವರಿಗೆ ಖುಷಿ ಆಗುತ್ತದೆ ಎಂಬುದಾದರೆ ಮಾತನಾಡಲಿ. ಇದೆಲ್ಲವನ್ನೂ ಜನತೆ ಗಮನಿಸುತ್ತಿದ್ದಾರೆ. ಮುಂದೆ ನಮಗೂ ಸಮಯ ಬರುತ್ತದೆ’
-ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News