ಜಸ್ಟಿಸ್ ಜೋಸೆಫ್ ಪದೋನ್ನತಿಯ ಕೊಲೀಜಿಯಂ ಶಿಫಾರಸನ್ನು ಪುನರುಚ್ಛರಿಸಿ

Update: 2018-05-10 08:01 GMT

ಹೊಸದಿಲ್ಲಿ, ಮೇ 10: ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರುಗಳಲ್ಲೊಬ್ಬರಾಗಿರುವ ಜಸ್ಟಿಸ್ ಜಸ್ತಿ ಚೆಲಮೇಶ್ವರ್ ಅವರು ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರಿಗೆ ಬುಧವಾರ ಬರೆದಿರುವ ಪತ್ರದಲ್ಲಿ  ಉತ್ತರಾಖಂಡ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿಗೊಳಿಸುವ  ಕೊಲೀಜಿಯಂ ಶಿಫಾರಸನ್ನು ಪುನರುಚ್ಛರಿಸಬೇಕೆಂದು ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟಿನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಚೆಲಮೇಶ್ವರ್ ತಾವು ಜೂನ್ 22ರಂದು ನಿವೃತ್ತರಾಗಲಿರುವುದರಿಂದ ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ನಡೆಸಬೇಕೆಂದು ಹಾಗೂ ಜಸ್ಟಿಸ್ ಕೆ ಎಂ ಜೋಸೆಫ್ ಅವರ ನೇಮಕಾತಿಗೆ ಕೊಲಿಜಿಯಂ ಮಾಡಿದ ಶಿಫಾರಸನ್ನು ಮತ್ತೆ ಸರಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ಬುಧವಾರ ಕೊಲಿಜಿಯಂ ಸಭೆ ನಡೆಸಿದ್ದರೂ ನಿರ್ಧಾರವನ್ನು ಮುಂದೂಡಿರುವುದನ್ನು ಉಲ್ಲೇಖಿಸಿರುವ ಚೆಲಮೇಶ್ವರ್ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಜನವರಿ 12ರಂದು ಕೊಲಿಜಿಯಂ ಜಸ್ಟಿಸ್ ಕೆ.ಎಂ. ಜೋಸೆಫ್ ಹಾಗೂ ಹಿರಿಯ ವಕೀಲೆ ಇಂದೂ ಮಲ್ಹೋತ್ರ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿದ್ದರೂ ಎಪ್ರಿಲ್ 26ರಂದು ಇಂದು ಮಲ್ಹೋತ್ರ ಅವರ ಪದೋನ್ನತಿಯನ್ನು ಮಾತ್ರ ಸರಕಾರ ಅನುಮೋದಿಸಿ ಜಸ್ಟಿಸ್ ಜೋಸೆಫ್ ಪದೋನ್ನತಿಗೆ ಸಂಬಂಧಿಸಿದ ಕಡತವನ್ನು ಹಿಂದಕ್ಕೆ ಕಳುಹಿಸಿತ್ತು.

ಚೆಲಮೇಶ್ವರ್ ಅವರು ಕಳೆದ ವರ್ಷ ಜಸ್ಟಿಸ್ ಜೋಸೆಫ್ ಅವರನ್ನು ಅತ್ಯುತ್ತಮ ನ್ಯಾಯಾಧೀಶರೆಂದು ಬಣ್ಣಿಸಿದ್ದರಲ್ಲದೆ ಅವರನ್ನು ಇನ್ನೂ ಸುಪ್ರೀಂ ಕೋರ್ಟಿಗೆ ಏಕೆ ಭಡ್ತಿಗೊಳಿಸಿಲ್ಲ ಎಂದು ಪ್ರಶ್ನಿಸಿದ್ದರು. ಅವರನ್ನು ಆಂಧ್ರ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿಸುವ ಕೊಲೀಜಿಯಂ ಶಿಫಾರಸನ್ನೂ ಮೋದಿ ಸರಕಾರ ಒಪ್ಪಿರಲಿಲ್ಲ. ಉತ್ತರಾಖಂಡದಲ್ಲಿ 2016ರಲ್ಲಿ ಮೋದಿ ಸರಕಾರ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ಜಸ್ಟಿಸ್ ಜೋಸೆಫ್ ರದ್ದುಗೊಳಿಸಿದ್ದರು ಎಂಬುದನ್ನು ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News