ಜಮ್ಮು ಕಾಶ್ಮೀರ ವಿದ್ಯಾರ್ಥಿಗೆ ಭೂಗೋಳ ಪಾಠ ಹೇಳಿದ ಸಚಿವೆ ಸುಷ್ಮಾ ಸ್ವರಾಜ್

Update: 2018-05-11 04:02 GMT

ಹೊಸದಿಲ್ಲಿ, ಮೇ 11: ಕೇಂದ್ರದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಫಿಲಿಫೀನ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ ಮೂಲದ ವಿದ್ಯಾರ್ಥಿಗೆ ಭೂಗೋಳ ಬೋಧಿಸಿದ ಅಪರೂಪದ ಘಟನೆ ವರದಿಯಾಗಿದೆ. ಈ ವಿದ್ಯಾರ್ಥಿಯ ಟ್ವಿಟ್ಟರ್ ಮಾಹಿತಿಯಲ್ಲಿ "ಭಾರತ ಆಕ್ರಮಿತ ಕಾಶ್ಮೀರ" ಮೂಲದವನು ಎಂದು ನಮೂದಿಸಲಾಗಿತ್ತು.

ತನ್ನ ಹಾಳಾದ ಪಾಸ್‌ಪೋಟ್ ಸರಿಪಡಿಸಲು ನೆರವಾಗುವಂತೆ ಕೋರಿ ಶೇಖ್ ಅತೀಕ್, ಸಚಿವೆಗೆ ಟ್ವೀಟ್ ಮಾಡಿದ್ದು, "ನಾನು ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಯಾಗಿದ್ದು, ಫಿಲಿಫೀನ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದೇನೆ. ನನ್ನ ಪಾಸ್‌ಪೋಟ್ ಹಾಳಾಗಿದ್ದು, ಹೊಸದಕ್ಕೆ ಒಂದು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದೆ. ಮನೆಗೆ ಹೋಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಇದು ಅಗತ್ಯವಾಗಿದ್ದು, ದಯವಿಟ್ಟು ಸಹಾಯ ಮಾಡಿ" ಎಂದು ಕೋರಿದ್ದ. ಆದರೆ ಟ್ವೀಟ್ ಮಾಡಿದ್ದ ಟ್ವಿಟ್ಟರ್ ಖಾತೆ ಈಗ ಡಿಲೀಟ್ ಮಾಡಲಾಗಿದೆ.

ಮರುದಿನ ಸುಷ್ಮಾ ಟ್ವೀಟ್ ಮೂಲಕ ಉತ್ತರಿಸಿ, ಖಂಡಿತವಾಗಿಯೂ ನೆರವು ನೀಡಲು ಸಾಧ್ಯ. ಆದರೆ ಆತ ನಮೂದಿಸಿದ ಸ್ಥಳವೇ ಸಮಸ್ಯೆ ಎಂದಿದ್ದರು. "ನೀವು ಜಮ್ಮು ಮತ್ತು ಕಾಶ್ಮೀರ ರಾಜ್ಯದವರಾದರೆ ಖಂಡಿತವಾಗಿಯೂ ನೆರವು ನೀಡುತ್ತೇವೆ. ಆದರೆ ನಿಮ್ಮ ಪ್ರೊಫೈಲ್ ಪ್ರಕಾರ, ನೀವು ಭಾರತ ಆಕ್ರಮಿತ ಕಾಶ್ಮೀರ ಪ್ರದೇಶದವರು. ಅಂಥ ಪ್ರದೇಶವೇ ಇಲ್ಲ" ಎಂದು ಗುರುವಾರ ಮುಂಜಾನೆ ಟ್ವೀಟಿಸಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದಿದ್ದು, ಸಂಜೆಯ ಒಳಗಾಗಿ 1300 ಪ್ರತಿಕ್ರಿಯೆ, 18 ಸಾವಿರ ಲೈಕ್ಸ್ ಹಾಗೂ 7700 ಮರು ಟ್ವೀಟ್‌ಗಳಾಗಿವೆ.

ಸುಷ್ಮಾ ಟ್ವೀಟ್ ಮಾಡಿದ ಕೇವಲ 15 ನಿಮಿಷಗಳ ಬಳಿಕ ಅತೀಕ್ ತನ್ನ ಸ್ಥಳ ವಿವರವನ್ನು ಜಮ್ಮು ಮತ್ತು ಕಾಶ್ಮೀರ/ ಮನಿಲಾ ಎಂದು ಪರಿಷ್ಕರಿಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಸುಷ್ಮಾ ತಕ್ಷಣ ಅದನ್ನು ಮನಿಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ ಹಾಗೂ ವಿದ್ಯಾರ್ಥಿಗೆ ನೆರವಾಗುವಂತೆ ಸೂಚಿಸಿದ್ದಾರೆ. "ನೀವು ನಿಮ್ಮ ಪ್ರೊಫೈಲ್ ಸರಿಪಡಿಸಿರುವುದು ಖುಷಿಕೊಟ್ಟಿದೆ. ಜೈದೀಪ್- ಇವರು ಜಮ್ಮು ಕಾಶ್ಮೀರದ ಭಾರತೀಯ ಪ್ರಜೆ. ದಯವಿಟ್ಟು ನೆರವು ನೀಡಿ" ಎಂದು ಮರು ಟ್ವೀಟ್ ಮಾಡಿದ್ದಾರೆ. ಜೈದೀಪ್ ಮಜೂಂದಾರ್ ಅವರು ಫಿಲಿಫೀನ್ಸ್‌ನಲ್ಲಿ ಭಾರತೀಯ ರಾಯಭಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News