ಎಚ್ಚರ, ಮತವನ್ನು ದಾನ ಮಾಡಬೇಡಿ!

Update: 2018-05-12 04:04 GMT

ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳೇ ದೊರೆಗಳು ಮತ್ತು ನಾವು ಮತಕೊಟ್ಟು ಆರಿಸಿದ ಜನಪ್ರತಿನಿಧಿಗಳು ನಾಡಿನ ಸೇವಕರು. ಇದು ಸುಳ್ಳೆಂದು ಗೊತ್ತಿದ್ದರೂ, ನಂಬುವುದರಲ್ಲಿ ಒಂದು ಸುಖವಿದೆ. ಪ್ರಜೆಗಳು ದೊರೆಗಳೇನೋ ನಿಜ. ಆದರೆ ಅದು ಮತ ಚಲಾವಣೆಯ ದಿನ ಮಾತ್ರ. ಉಳಿದ ಐದು ವರ್ಷ ಅವರ ಸೇವಕರಂತೆ ಬದುಕುವುದು ಈ ದೇಶದ ಪ್ರಜೆಗೆ ಅಭ್ಯಾಸವಾಗಿ ಬಿಟ್ಟಿದೆ. ಹಾಗೆಂದು ಅದಕ್ಕಾಗಿ ನಮ್ಮ ದೊರೆಗಳನ್ನು ನಿಂದಿಸಿ ಫಲವಿಲ್ಲ. ಮತದಾರನ ದೌರ್ಬಲ್ಯಗಳನ್ನು ಬಳಸಿಕೊಂಡು ಅವರು ದೊರೆಗಳಾಗಿ ಮೆರೆಯುತ್ತಿದ್ದಾರೆ. ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿ ದೊರೆಗಳಾಗಿ ಬಾಳಿ ಎಂದು ಸಂವಿಧಾನ ನಮಗೆ ನಿರ್ದೇಶಿಸಿದೆ. ಆದರೆ ಸಣ್ಣ ಸಣ್ಣ ಬೆಲೆಗಳಿಗಾಗಿ ನಾವು ಆ ಸ್ಥಾನವನ್ನು ಮಾರಿಕೊಂಡಿದ್ದೇವೆ. ಪರಿಣಾಮವಾಗಿ ಒಂದು ದಿನದ ದೊರೆಯಾಗುವುದರಲ್ಲೇ ತೃಪ್ತಿ ಪಡುತ್ತಿದ್ದೇವೆ.

ಜಾತಿ, ಧರ್ಮ, ದ್ವೇಷ, ಸೀರೆ, ಹೆಂಡ, ಹಣ ಇತ್ಯಾದಿಗಳಿಗಾಗಿ ನಮ್ಮ ನಮ್ಮ ಮತಗಳನ್ನು ಮಾರಿ, ಉಳಿದ ದಿನಗಳೆಲ್ಲ ರಾಜಕಾರಣಿಗಳನ್ನು ನಿಂದಿಸುತ್ತಾ ಕಾಲ ಕಳೆಯುತ್ತೇವೆ. ಆ ನಿಂದನೆ ಆಕಾಶಕ್ಕೆ ಉಗುಳಿದಂತೆ. ಮತ್ತೆ ಅದು ನಮ್ಮ ಮುಖದ ಮೇಲೆಯೇ ಬಂದು ಬೀಳುತ್ತದೆ. ನಮ್ಮ ಮತಗಳು ಒಮ್ಮೆ ನಮ್ಮ ಕೈ ಜಾರಿದರೆ ಮತ್ತೆ ಆ ಹಕ್ಕಿಗಾಗಿ ನಾವು ಐದು ವರ್ಷ ಕಾಯಬೇಕು. ಆದುದರಿಂದ ನಮ್ಮ ಮತಗಳನ್ನು ಮುಂದಿಟ್ಟುಕೊಂಡು ಜನಪ್ರತಿನಿಧಿಗಳ ಜೊತೆಗೆ ಯಾವ ರೀತಿ ವ್ಯವಹರಿಸಬೇಕು ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಮೊತ್ತ ಮೊದಲಾಗಿ ‘ಮತ’ವನ್ನು ದಾನ ಮಾಡುವುದಿಲ್ಲ ಎಂದು ಶಪಥ ಮಾಡಬೇಕಾಗಿದೆ. ಸಾಧಾರಣವಾಗಿ ದಾನ ಮಾಡಿದ ಬಳಿಕ ಅದರಿಂದ ನಮ್ಮೆಲ್ಲ ಹಕ್ಕುಗಳನ್ನು ಕಳೆದುಕೊಂಡು ಬಿಡುತ್ತೇವೆ. ನಮ್ಮಿಂದ ದಾನ ಸ್ವೀಕರಿಸಿದವರಿಂದ ನಾವು ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವಂತಿಲ್ಲ. ಮತವನ್ನು ‘ದಾನ’ವೆಂದು ಕರೆಯುವುದೇ ಮತದಾರರಿಗೆ ಮಾಡುವ ಅತಿ ದೊಡ್ಡ ಮೋಸವಾಗಿದೆ. ಅದೇ ರೀತಿ, ನಮ್ಮ ಮತವನ್ನು ನಾವೇ ಮಾರಿಕೊಳ್ಳುವುದು ಕೂಡ ನಾವು ನಮಗೆ ಎಸಗುವ ದ್ರೋಹವೇ ಆಗಿದೆ.

ಸೀರೆ, ಹೆಂಡ, ಹಣ ಇತ್ಯಾದಿಗಳಿಗೆ ಮತಗಳನ್ನು ಮಾರಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿದ ಬಳಿಕ, ನಾವು ಅವನಿಂದ ಅಭಿವೃದ್ಧಿ ಕಾರ್ಯವನ್ನು ನಿರೀಕ್ಷಿಸುವುದು ಎಷ್ಟು ಸರಿ? ನಮ್ಮ ಮತದ ಬೆಲೆ ಸೀರೆ, ಇಂತಿಷ್ಟು ಹಣ ಎಂದು ನಾವೇ ನಿರ್ಧರಿಸಿದ ಮೇಲೆ, ಗೆದ್ದ ಅಭ್ಯರ್ಥಿ ನಮಗಾಗಿ ಇನ್ನಷ್ಟು ಕೆಲಸಗಳನ್ನು ಯಾಕೆ ಮಾಡಬೇಕು? ಹಾಗೆಯೇ ಹೆಂಡ ಕೊಟ್ಟು ಮತವನ್ನು ದೋಚುವುದಕ್ಕೂ ಜಾತಿ, ಧರ್ಮಗಳ ಹೆಸರಲ್ಲಿ ದ್ವೇಷವನ್ನು ಬಿತ್ತಿ ಮತ ದೋಚುವುದಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡೂ ಅಮಲುಗಳೇ ಆಗಿವೆ. ಅಭಿವೃದ್ಧಿ ಮಾಡದೇ ಐದು ವರ್ಷ ಜನರಿಂದ ದೂರವಿದ್ದವರು, ಜನರಿಗೆ ಸಮೀಪವಾಗಲು ಬಳಸುವ ಅಡ್ಡದಾರಿ ಜಾತಿ ಮತ್ತು ಧರ್ಮ. ಇದೀಗ ಮತ್ತೆ ಜಾತಿಯ ಹೆಸರಲ್ಲಿ, ಧರ್ಮದ ಹೆಸರಲ್ಲಿ ಜನರನ್ನು ಪರಸ್ಪರ ಕಚ್ಚಾಡಿಸಿ ಮತ ಕೇಳಲು ಬಂದಿದ್ದಾರೆ. ಹಿಂಸೆ ಮತ್ತು ಅಭಿವೃದ್ಧಿ ಜೊತೆ ಜೊತೆಯಾಗಿ ಸಾಗುವುದು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಜನರು ಸೌಹಾರ್ದದಿಂದ ಬದುಕುವುದಕ್ಕೆ ಅವಕಾಶ ನೀಡದ ರಾಜಕೀಯ ಪಕ್ಷಗಳನ್ನು ಸಂಪೂರ್ಣ ತಿರಸ್ಕರಿಸಬೇಕಾಗಿದೆ. ನಮಗಿಂದು ಮತ ನೀಡುವ ಹಕ್ಕನ್ನು ನೀಡಿರುವುದು ಸಂವಿಧಾನ. ಅದು ದೊರೆಗಳನ್ನು ಕೆಳಗಿಳಿಸಿ, ಆ ಸ್ಥಾನದಲ್ಲಿ ಪ್ರಜೆಗಳನ್ನು ಕುಳ್ಳಿರಿಸಿತು.

ಸಂವಿಧಾನದ ವಿರುದ್ಧ ಮಾತನಾಡುತ್ತಿರುವವರಿಗೆ, ಹಳೆಯ ವ್ಯವಸ್ಥೆ ಬೇಕಾಗಿದೆ. ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡಿದ ಸಂವಿಧಾನವನ್ನು ಬದಲಾಯಿಸಬೇಕಾಗಿದೆ. ಮತ ಹಾಕುವ ಸಂದರ್ಭದಲ್ಲಿ ಇವರ ಬಗ್ಗೆ ನಮ್ಮಲ್ಲಿ ಎಚ್ಚರ ಇರಬೇಕಾಗಿದೆ. ಸಂವಿಧಾನದ ಹಕ್ಕುಗಳನ್ನು ದುರ್ಬಳಕೆ ಮಾಡಿ, ಸಂವಿಧಾನದ ವಿರುದ್ಧ ಸಂಚು ರೂಪಿಸುವ, ಈ ದೇಶವನ್ನು ಮತ್ತೆ ಹಳೆಯ ಊಳಿಗಮಾನ್ಯ ಪದ್ಧತಿಗೆ ತಳ್ಳುವ ಶಕ್ತಿಗಳನ್ನು ಗುರುತಿಸುವುದು ಮತದಾರರ ಆದ್ಯ ಕರ್ತವ್ಯ. ಮತದಾರರು ಮತವನ್ನು ದಾನ ಮಾಡುವುದಲ್ಲ, ಅದನ್ನು ತನ್ನ ಇಷ್ಟದ ಅಭ್ಯರ್ಥಿಗೆ ಸಾಲವಾಗಿ ನೀಡಬೇಕು. ತಾನು ಪಡೆದಿರುವುದು ಸಾಲ ಎನ್ನುವುದು ಅರಿವಾದಾಗ, ಜನಪ್ರತಿನಿಧಿ ಅದನ್ನು ಮರುಪಾವತಿ ಮಾಡುವ ಕುರಿತಂತೆ ಯೋಚಿಸುತ್ತಾನೆ. ಮತವನ್ನು ಸಾಲವಾಗಿ ನೀಡಿದ ಮತದಾರರಿಗೂ ಆತನಿಂದ ಅದನ್ನು ಬಡ್ಡಿ ಸಮೇತ ವಸೂಲಿ ಮಾಡುವ ಅಧಿಕಾರ ಬರುತ್ತದೆ. ‘ತಾವು ಸಾಲಗಾರರು’ ಎಂಬ ಮನಸ್ಥಿತಿಯನ್ನು ಮತದಾರರು ಜನಪ್ರತಿನಿಧಿಗಳಲ್ಲಿ ಬಿತ್ತುವ ಕೆಲಸ ಮೊದಲು ನಡೆಯಬೇಕು.

ಮುಂದಿನ ಐದು ವರ್ಷಗಳಲ್ಲಿ ಸಾಲ ಸಂದಾಯ ಮಾಡುವಲ್ಲ್ಲಿ ವಿಫಲವಾದರೆ, ಆತ ಮತ್ತೆ ಜನರಿಗೆ ಮುಖತೋರಿಸುವಂತೆ ಇರಬಾರದು. ಇದೇ ಸಂದರ್ಭದಲ್ಲಿ, ಮತದಾರರಿಗೆ ‘ನೋಟಾ’ಕ್ಕೆ ಮತ ಹಾಕುವ ಹಕ್ಕಿದೆ. ಅಂದರೆ, ಕ್ಷೇತ್ರವನ್ನು ಪ್ರತಿನಿಧಿಸಲು ಯಾವುದೇ ಅಭ್ಯರ್ಥಿಗಳು ಅನರ್ಹವೆಂದಾದರೆ, ಅವರೆಲ್ಲರನ್ನು ತಿರಸ್ಕರಿಸಿ ‘ನೋಟಾ’ಕ್ಕೆ ಮತ ಹಾಕಬಹುದು. ಈ ಪರಿಕಲ್ಪನೆಯೇನೋ ಚೆನ್ನಾಗಿದೆ. ನೋಟಾ ಎನ್ನುವುದು ನಮ್ಮೆಲ್ಲರ ಕಲ್ಪನೆಯ ಒಬ್ಬ ಅಭ್ಯರ್ಥಿ. ಆದರೆ ಆತ ಕಣದಲ್ಲಿ ಅಸ್ತಿತ್ವದಲ್ಲಿಲ್ಲ. ಇಲ್ಲಿ ಇನ್ನೊಂದು ಸಮಸ್ಯೆಯಿದೆ. ನೋಟಾಕ್ಕೆ ಬಿದ್ದ ಮತಗಳು ಉಳಿದ ಅಭ್ಯರ್ಥಿಗಳಿಗೆ ಬಿದ್ದ ಮತಗಳಿಗಿಂತ ಅಧಿಕವಿದ್ದರೆ ಮರುಚುನಾವಣೆ ನಡೆಯುತ್ತದೆ ಎಂದಾದಲ್ಲಿ ನೋಟಾಕ್ಕೆ ಮತ ಚಲಾಯಿಸಬಹುದು. ಚುನಾವಣಾ ಆಯೋಗದ ಪ್ರಕಾರ ನೋಟಾ ಅತ್ಯಧಿಕ ಮತಗಳನ್ನು ಪಡೆದರೆ, ಅದರ ಆನಂತರ ಯಾವ ಅಭ್ಯರ್ಥಿ ಅಧಿಕ ಮತಗಳನ್ನು ಪಡೆದಿರುತ್ತಾನೋ ಅವನೇ ಗೆದ್ದ ಅಭ್ಯರ್ಥಿಯಾಗಿರುತ್ತಾನೆ. ಹೀಗಿರುವಾಗ, ನೋಟಾಕ್ಕೆ ಮತ ಹಾಕಿ ಮತದಾರರು ತಮ್ಮ ಮತವನ್ನು ವ್ಯರ್ಥಗೊಳಿಸುವುದಾದರೂ ಯಾಕೆ? ಇಂತಹ ಸಂದರ್ಭದಲ್ಲಿ, ಇರುವ ಅಭ್ಯರ್ಥಿಗಳಲ್ಲಿ ಕಡಿಮೆ ಕಳಪೆ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಮತದಾರರ ಹೊಣೆಗಾರಿಕೆಯಾಗಿದೆ.

 ಮತ ಚಲಾವಣೆಯೆಂದರೆ, ಪ್ರಜಾಸತ್ತೆಯ ಅಡಿಗಲ್ಲಿಗೆ ನಾವು ನೀಡುವ ನಮ್ಮ ಪಾಲಿನ ಇಟ್ಟಿಗೆ. ಪ್ರತಿ ಇಟ್ಟಿಗೆಗಳೂ ತನ್ನದೇ ಆದ ಕಾರಣಕ್ಕೆ ಮಹತ್ವವನ್ನು ಪಡೆದಿರುತ್ತವೆ. ಒಂದು ಇಟ್ಟಿಗೆಯ ಕೊರತೆಯೂ ಪ್ರಜಾಸತ್ತೆಯನ್ನು ದುರ್ಬಲಗೊಳಿಸಬಹುದು. ಈ ಕಾರಣದಿಂದ, ಕನ್ನಡ ನಾಡು ನುಡಿಯನ್ನು ಕಾಪಾಡುವ, ಬಡ ರೈತರ ಪರವಾಗಿ ಚಿಂತಿಸುವ, ನಾಡಿನ ಅಖಂಡತೆಯನ್ನು ಎತ್ತಿ ಹಿಡಿಯುವ, ಸಂವಿಧಾನವನ್ನು ಗೌರವಿಸುವ ಅಭ್ಯರ್ಥಿಗಳನ್ನು ಗುರುತಿಸಿ ಅವರನ್ನು ಗೆಲ್ಲಿಸುವುದು ರಾಜ್ಯದ ದೃಷ್ಟಿಯಿಂದ ಮಾತ್ರವಲ್ಲ, ದೇಶದ ದೃಷ್ಟಿಯಿಂದಲೂ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News