ಕರ್ನಾಟಕದಲ್ಲಿ ಹಿನ್ನಡೆ: ಅಮಿತ್ ಶಾ ವರ್ಚಸ್ಸಿಗೆ ಮಂಕು

Update: 2018-05-21 03:52 GMT

ಹೊಸದಿಲ್ಲಿ, ಮೇ 21: ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿ ವಿಫಲವಾಗಿರುವುದು ಪಕ್ಷದಲ್ಲಿ ಆಂತರಿಕವಾಗಿ ಯಾವ ಪರಿಣಾಮವನ್ನೂ ಬೀರದು; ಆದರೆ ಈ ಹಿನ್ನಡೆ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕಳೆದ ಮೂರು ವರ್ಷಗಳಿಂದ ಪಡೆದ ವರ್ಚಸ್ಸನ್ನು  ಮಂಕಾಗಿಸಲಿದೆ ಎಂಬ ಅಭಿಮತವನ್ನು ಹಿರಿಯ ಮುಖಂಡರು ಮತ್ತು ರಾಜಕೀಯ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆಯ ಹೀನಾಯ ಸೋಲನ್ನು ಶಾ ಸಮರ್ಥವಾಗಿಯೇ ನಿರ್ವಹಿಸಿದ್ದರು. ಜೆಡಿಯು ಮುಖಂಡ ನಿತೀಶ್ ಕುಮಾರ್ ಬಣದ ಮೈತ್ರಿಯೊಂದಿಗೆ 2017ರಲ್ಲಿ ಬಿಹಾರ ಅಧಿಕಾರ ಸೂತ್ರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈಶಾನ್ಯ ರಾಜ್ಯಗಳ ಅಭೂತಪೂರ್ವ ಯಶಸ್ಸು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಅಸ್ತಿತ್ವ ಸಾಬೀತುಪಡಿಸಿರುವುದು ಅಂತಿಮವಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಜಯ ಸಾಧಿಸಿರುವುದು ಶಾ ವರ್ಚಸ್ಸು ಬೆಳೆಯಲು ಕಾರಣವಾಗಿತ್ತು.

ಆಧುನಿಕ ಚಾಣಕ್ಯ ಎಂದೇ ಕರೆಸಿಕೊಂಡಿರುವ ಶಾ ವ್ಯತಿರಿಕ್ತ ರಾಜಕೀಯ ಸಮರವನ್ನೂ ಜಯಿಸಬಲ್ಲವರು ಎನ್ನುವುದು ಗೊವಾ ಹಾಗೂ ಮಣಿಪುರ ಚುನಾವಣೆಗಳಿಂದ ಸಾಬೀತಾಗಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ, ಅಧಿಕಾರ ಹಿಡಿಯಲು ವಿಫಲ ಯತ್ನ ನಡೆಸಿರುವುದು ಶಾ ಹಾಗೂ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಮೊದಲನೆಯದಾಗಿ ಬಿಜೆಪಿ ಹಾಗೂ ಶಾ ಅವರ ನಾಗಾಲೋಟಕ್ಕೆ ತಡೆಯೊಡ್ಡಬಹುದು ಎಂಬ ವಿಶ್ವಾಸ ವಿರೋಧ ಪಕ್ಷಗಳಲ್ಲಿ ವೃದ್ಧಿಸಿದೆ. ಬಿಜೆಪಿ ವಿರುದ್ಧ 2019ರ ಚುನಾವಣೆಯಲ್ಲಿ ಫೆಡರಲ್ ಫ್ರಂಟ್ ಸಂಘಟಿಸುವ ಕಾರ್ಯಕ್ಕೂ ಇದು ವೇಗ ನೀಡಲಿದೆ.

ಈ ವರ್ಷ ಶಾ ಅಧಿಕಾರಾವಧಿ ಮುಗಿಯಲಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆವರೆಗಾದರೂ ಶಾ ಅದೇ ಹುದ್ದೆಯಲ್ಲಿ ಮುಂದುವರಿಯಬೇಕು. ಇದಕ್ಕಾಗಿ ಪಕ್ಷದಲ್ಲಿ ಸಂಪೂರ್ಣ ನಿಯಂತ್ರಣ ಉಳಿಸಿಕೊಳ್ಳಬೇಕಾದ್ದು ಅನಿವಾರ್ಯ. ಎಷ್ಟೇ ಸಂಖ್ಯಾಬಲ ಇದ್ದರೂ ಶಾ ತಮ್ಮ ಪಕ್ಷದ ಸರ್ಕಾರ ರಚಿಸಬಲ್ಲರು ಎಂಬ ಮಾನಸಿಕ ಸ್ಥಿತಿ ಕರ್ನಾಟಕ ವೈಫಲ್ಯದ ಬಳಿಕ ಉಳಿದಿಲ್ಲ ಎಂದು ಬಿಜೆಪಿ ಮುಖಂಡರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News