10ನೇ ತರಗತಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ

Update: 2018-05-21 04:40 GMT

ಭೋಪಾಲ್, ಮೇ 21: ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಮೂರು ದಿನಗಳ ಕಾಲ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಮಂಡಸಾರ್ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಇಂಥ ಮೂರು ಪ್ರಕರಣಗಳು ವರದಿಯಾಗಿವೆ.

ಮತ್ತೊಂದು ಘಟನೆಯಲ್ಲಿ ಸಾತ್ನಾ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ. ಮೂರನೇ ಘಟನೆಯಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮಂಡಸಾರ್ ಘಟನೆಯಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಬಾಲಕಿ ತನ್ನ ಅಂಕ ಪಟ್ಟಿ ತರುವ ಸಲುವಾಗಿ ಶಾಲೆಗೆ ಹೋಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಶಾಲೆಯಿಂದ ಬರುತ್ತಿದ್ದ ವೇಳೆ ಇಬ್ಬರು ಪರಿಚಿತರು ಬೈಕ್‌ನಲ್ಲಿ ಬಿಡುವ ಆಮಿಷವೊಡ್ಡಿ, ಇತರ ಮೂವರ ಸಹಾಯದಿಂದ ಕಾಡಿಗೆ ಎಳೆದುಕೊಂಡು ಹೋಗಿ ಮೂರು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ.

ಬಾಲಕಿಯ ಪೋಷಕರು ಮೇ 15ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಬಾಲಕಿಯ ಪತ್ತೆಯಾಗಿರಲಿಲ್ಲ. ಮೂರು ದಿನಗಳ ಬಳಿಕ ಮನೆಗೆ ವಾಪಸ್ಸಾದ ಬಾಲಕಿ ಘಟನೆಯನ್ನು ವಿವರಿಸಿದ್ದು, ಪೊಲೀಸರಿಗೆ ಆ ಬಳಿಕ ದೂರು ನೀಡಲಾಗಿದೆ. ಈ ಸಂಬಂಧ ಎಲ್ಲ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News