ಬಿಜೆಪಿಗರ ‘ಶಾಸಕರ ಖರೀದಿ ಯತ್ನ’ ಪ್ರಕರಣದ ತನಿಖೆಗೆ ಮನವಿ: ರಾಮಲಿಂಗಾರೆಡ್ಡಿ

Update: 2018-05-21 08:39 GMT

ಬೆಂಗಳೂರು, ಮೇ 21: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಯತ್ನಿಸಿದ ಆಡಿಯೋ ಕ್ಲಿಪ್ಪಿಂಗ್‌ಗಳು ಬಿಡುಗಡೆಯಾಗಿರುವುದರಿಂದ ಅವರ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಶಾಸಕರ ಖರೀದಿ ಪ್ರಯತ್ನದ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದರು.
ಆಪರೇಷನ್ ಕಮಲಕ್ಕೆ ಯತ್ನಿಸಿದ ಆಡಿಯೋ ಕ್ಲಿಪ್ಪಿಂಗ್‌ಗಳು ನಕಲಿ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಬಿಜೆಪಿಯವರು ಏನು ಸತ್ಯ ಹರಿಶ್ಚಂದ್ರರಾ ? 2008ರಲ್ಲಿ ಅಧಿಕಾರಕ್ಕೆ ಬಂದಾಗ ಏನೆಲ್ಲಾ ಮಾಡಿದ್ದಾರೆ ಎಂಬುದನ್ನು ರಾಜ್ಯದ ಜನತೆ ಮರೆತಿಲ್ಲ ಎಂದು ಅವರು ಟೀಕಿಸಿದರು.

 ಬಿಜೆಪಿ ತನ್ನ ಅಧಿಕಾರವಧಿಯಲ್ಲಿ ಕೊಳ್ಳೆ ಹೊಡೆದ ದುಡ್ಡಲ್ಲಿ ಈಗ ಶಾಸಕರ ಖರೀದಿ ಮಾಡುತ್ತಿದೆಯೇ? ಅಥವಾ ದಿಲ್ಲಿಯಿಂದ ಅವರಿಗೆ ಹಣ ಬರುತ್ತಿದೆಯೇ? ಎಂದು ಪ್ರಶ್ನಿಸಿದ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ಪಿಂಗ್‌ಗಳು ನಕಲಿ ಅಲ್ಲ. ಈ ಬಗ್ಗೆ ತನಿಖೆ ಮಾಡಲು ಪತ್ರವನ್ನು ಬರೆಯುತ್ತೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News