ಗಾಳಿಯ ಮೂಲಕ 'ನಿಪಾ' ವೈರಸ್ ಹರಡುವುದಿಲ್ಲ: ಕೇರಳ ಆರೋಗ್ಯ ಸಚಿವೆ ಶೈಲಜಾ

Update: 2018-05-21 09:00 GMT

ಕಲ್ಲಿಕೋಟೆ, ಮೇ 21: 'ನಿಪಾ' ವೈರಸ್ ಜ್ವರ ಹರಡದಂತೆ ತಡೆಯುವ ಎಲ್ಲ ಕ್ರಮಗಳನ್ನು ಈಗಾಗಲೇ ಸರಕಾರ ಕೈಗೊಂಡಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ. ಗಾಳಿಯಲ್ಲಿ 'ನಿಪಾ' ವೈರಸ್  ಹರಡುವುದಿಲ್ಲ. ಆದ್ದರಿಂದ ಜನರು ಹೆದರುವ ಯಾವುದೇ ಅಗತ್ಯವಿಲ್ಲ. ರೋಗಪೀಡಿತ ಬಾವಲಿಗಳ ಮೂಲಕ ವೈರಸ್ ಹರಡುತ್ತದೆ. ಆದ್ದರಿಂದ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತವಾದಾಗಲೇ ರೋಗಿಗಳಿಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಬಾವಲಿಗಳನ್ನು ಹೊರತು ಬೇರೆ ಪ್ರಾಣಿಗಳ ಮೂಲಕ  ಈ ಜ್ವರ ಹರಡುತ್ತದೆ ಎನ್ನುವ ಬಗ್ಗೆ ಈವರೆಗೆ ತಿಳಿದುಬಂದಿಲ್ಲ ಎಂದವರು ಹೇಳಿದರು.

ರೋಗಪೀಡಿತರಿಗೆ ತಕ್ಷಣ ನೀಡಲು ಔಷಧ ಲಭ್ಯವಿಲ್ಲ. ಏಕೆಂದರೆ ಜಗತ್ತಿನಲ್ಲೇ ಈ ವೈರಸ್‍ಗೆ ಅವಶ್ಯಕವಾಗಿರುವ ಔಷಧದ ಕೊರತೆ ಇದೆ. ಆದರೂ ಲಭ್ಯವಿರುವಲ್ಲಿಂದ ಔಷಧ ತರಿಸಿಕೊಂಡಿದ್ದೇವೆ ಎಂದವರು ಮಾಹಿತಿ ನೀಡಿದರು.

ಅನಿರೀಕ್ಷಿತ  ಸನ್ನಿವೇಶಗಳನ್ನು ನಿಭಾಯಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಡಿಎಂಒ ಸಂಚಾಲಕರಾಗಿರುವ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಸರಕಾರ 'ನಿಪಾ' ವೈರಸ್ ಚಿಕಿತ್ಸೆಗೆ ನೆರವು ನೀಡಲಿದೆ ಎಂದು ಖಾಸಗಿ ಆಸ್ಪತ್ರೆಗಳಿಗೂ  ತಿಳಿಸಲಾಗಿದೆ. ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಕೂಡಾ ನೆರವು ಒದಗಿಸುತ್ತಿದೆ. ಪೆರಾಂಬ್ರದ ಸೂಫಿಕ್ಕಡದಲ್ಲಿ ಇಬ್ಬರು ಮೃತಪಟ್ಟಿದ್ದು ಕೂ 'ನಿಪಾ' ವೈರಸ್‍ನಿಂದ ಎಂದು ನಿನ್ನೆಯಷ್ಟೇ ತಿಳಿಯಿತು. ಆ ನಂತರ ಕೇಂದ್ರ ಸರಕಾರಕ್ಕೆ ತಿಳಿಸಲಾಗಿದೆ. ಈಗಾಗಲೇ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರಕಾರದ ನಿಯೋಗ ಬಂದು ತಲುಪಿದೆ ಎಂದು ಶೈಲಜಾ ಹೇಳಿದರು.

ನಿಫಾ ವೈರಸ್‍ ನಿಂದ ಮೃತಪಟ್ಟ ನರ್ಸ್ ಲಿನಿಯವರ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿತ್ತು. ನಂತರ ರೋಗ ಹರಡದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ  ಸಂಬಂಧಿಕರ ಸಮ್ಮತಿಯೊಂದಿಗೆ ವಿದ್ಯುತ್ ಶವಸಂಸ್ಕಾರ ನಡೆಸಲಾಯಿತು. 'ನಿಪಾ' ವೈರಸ್ ಜ್ವರದಿಂದ ಮೃತಪಟ್ಟವರ ಮೃತದೇಹವನ್ನು ಕುಟುಂಬದವರಿಗೆ ನೀಡಲಾಗುವುದು. ಆದರೆ ಅವರು  ರೋಗ ಹರಡದಂತೆ ಎಚ್ಚರವಹಿಸಿದರೆ ಸಾಕು ಎಂದು ಸಚಿವೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News