ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ತೆರೆಮರೆಯಲ್ಲಿ ನಡೆಯುತ್ತಿದೆಯೇ ಯತ್ನ?

Update: 2018-05-21 12:09 GMT

ಬೆಂಗಳೂರು, ಮೇ 21: ವಿಶ್ವಾಸಮತಯಾಚನೆ ಮಾಡದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್-ಜೆಡಿಎಸ್ ನಾಯಕರು ಗೆಲುವಿನ ನಗೆ ಬೀರಿ ‘ಸರಕಾರ ನಮ್ಮದೇ’ ಎಂದದ್ದೂ ಆಗಿದೆ. ಇನ್ನೇನು ಕುಮಾರಸ್ವಾಮಿ ಪ್ರಮಾಣವಚನಕ್ಕೆ 2 ದಿನಗಳಷ್ಟೇ ಬಾಕಿಯುಳಿದಿವೆ. ಆದರೆ ಈ ನಡುವೆ ಜೆಡಿಎಸ್ ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಯಾಚನೆಯಲ್ಲಿ ಸೋಲುವಂತೆ ಮಾಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಯತ್ನ ತೆರೆಮರೆಯಲ್ಲಿ ನಡೆಯುತ್ತಿದೆಯೇ?... ಅಂತಹದೊಂದು ಸಂಶಯ ರಾಜಕೀಯ ವಲಯಗಳಲ್ಲಿ ಬಲವಾಗಿ ಕೇಳಿ ಬರುತ್ತಿದೆ. 

ತೀವ್ರ ಕುತೂಹಲ ಕೆರಳಿಸಿದ್ದ, ಇಡೀ ದೇಶದ ಚಿತ್ತವೇ ನೆಟ್ಟಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡಲೇ ಇಲ್ಲ. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ 104 ಸ್ಥಾನಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಆನಂತರ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ನಡೆಸಿದ ಕಸರತ್ತು, ಆನಂತರದ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲೂ ಸುದ್ದಿಯಾಯಿತು. ಮ್ಯಾಜಿಕ್ ನಂಬರ್ ಗೆ ತಲುಪಲು ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದರೂ ಕಾಂಗ್ರೆಸ್-ಜೆಡಿಎಸ್ ತನ್ನ ಶಾಸಕರನ್ನು ಬಿಟ್ಟು ಕೊಡಲಿಲ್ಲ. ಕೊನೆ ಕ್ಷಣದವರೆಗೆ ಬಿಜೆಪಿ ನಡೆಸಿದ ಪ್ರಯತ್ನಗಳು ವಿಫಲವಾಗಿ, ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು.

ಇನ್ನೇನು ಎರಡು ದಿನಗಳಲ್ಲಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಹಾಗು ಬಹುಮತ ಸಾಬೀತುಪಡಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ನಡುವೆ ಬಿಜೆಪಿಯು ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಪ್ರಮಾಣವಚನ ಸ್ವೀಕಾರ ಹಾಗು ಸಚಿವ ಸಂಪುಟ ರಚನೆಯವರೆಗೆ ಹೋಟೆಲ್ ಬಿಟ್ಟು ಹೊರಹೋಗದಂತೆ ಕಾಂಗ್ರೆಸ್-ಜೆಡಿಎಸ್ ತನ್ನ ಶಾಸಕರಿಗೆ ಈಗಾಗಲೇ ಸೂಚನೆ ನೀಡಿದೆ. ಆದರೆ ಈ ನಡುವೆಯೂ ಬಿಜೆಪಿಯು ಆಪರೇಷನ್ ಕಮಲಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.

ಕಾಂಗ್ರೆಸ್ ನ ಹಿರಿಯ ಹಾಗು ಪ್ರಮುಖ ನಾಯಕರು ಸರ್ಕಾರ  ರಚನೆಯ ಹಿನ್ನೆಲೆಯಲ್ಲಿ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಹೊಟೇಲ್ ನಲ್ಲಿ ಶಾಸಕರು ಇದ್ದರೂ, ಪ್ರಮುಖ ನಾಯಕರು ಸರ್ಕಾರ ರಚನೆ ಮತ್ತು ಸಚಿವ ಸ್ಥಾನದ ಹಿಂದೆ ಇರುವುದನ್ನು ಬಳಸಿಕೊಂಡು ಶಾಸಕರನ್ನು ಸೆಳೆಯುವ ಯತ್ನಕ್ಕೆ ಬಿಜೆಪಿ ಕೈಹಾಕಲಿದೆ ಎಂದು ಹೇಳಲಾಗಿದೆ. 10ರಿಂದ 12 ಶಾಸಕರು ವಿಶ್ವಾಸಮತಯಾಚನೆಯಂದು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯದ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಬಿಜೆಪಿ ಕೊನೆಯ ಪ್ರಯತ್ನಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಆದರೆ ಹೀಗೆ ಮಾಡುವುದರಿಂದ ಬಿಜೆಪಿಗೂ ಅಧಿಕಾರಕ್ಕೇರಲು ಸಾಧ್ಯವಾಗುವುದಿಲ್ಲ. ಬದಲಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಬಿಜೆಪಿ ಪ್ರಮುಖ ಅಸ್ತ್ರವಾಗಿ ಬಳಸುತ್ತಿರುವುದು ಯಡಿಯೂರಪ್ಪ ವಿಶ್ವಾಸಮತಯಾಚನೆ ದಿನ ಕೊನೆ ಕ್ಷಣದವರೆಗೂ ನಾಪತ್ತೆಯಾಗಿದ್ದ ಇಬ್ಬರು ಕಾಂಗ್ರೆಸ್ ಶಾಸಕರನ್ನು ಎನ್ನಲಾಗಿದೆ. ಅಂದು ಕೊನೆ ಕ್ಷಣದವರೆಗೂ ನಾಪತ್ತೆಯಾಗಿದ್ದ ಆನಂದ್ ಸಿಂಗ್ ಹಾಗು ಪ್ರತಾಪ್ ಬಿಜೆಪಿ ಪರ ವಾಲಿದ್ದಾರೆ ಎನ್ನಲಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಈ ಇಬ್ಬರೂ ಶಾಸಕರು ಕಾಂಗ್ರೆಸ್ ಪರವಾಗಿ ನಿಂತರು. ಆದರೆ ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ನ ಉಳಿದ ಯಾವ ಶಾಸಕರೂ ಬೆಂಬಲ ನೀಡುವುದಿಲ್ಲ, ಇದರಿಂದಾಗಿ ನಾವು ಬಿಜೆಪಿಗೆ ಬೆಂಬಲ ನೀಡಿದರೂ ಪ್ರಯೋಜನವಾಗದು. ಜೊತೆಗೆ ಅನರ್ಹಗೊಳ್ಳಬೇಕಾಗುತ್ತದೆ ಎಂದು ಅರಿವಾಗುತ್ತಲೇ ಈ ಇಬ್ಬರೂ ಕಾಂಗ್ರೆಸ್ ನ ಜೊತೆಗೇ ನಿಂತರು ಎನ್ನಲಾಗಿದ್ದು, ಇದೀಗ ಇವರಿಬ್ಬರ ಮೂಲಕವೇ ಬಿಜೆಪಿ ತನ್ನ ಕಾರ್ಯ ಸಾಧನೆಗೆ ಹೊರಟಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರು ಬೇರೆ ಬೇರೆ ಹೊಟೇಲ್ ಗಳಲ್ಲಿದ್ದು, ಕುಮಾರಸ್ವಾಮಿ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ದಿಲ್ಲಿಗೆ ತೆರಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನ ಪ್ರಮುಖ ನಾಯಕರು ಸಚಿವ ಸ್ಥಾನ ಗಿಟ್ಟಿಸುವ ತರಾತುರಿಯಲ್ಲಿದ್ದಾರೆ. ಈ ನಡುವೆ ಹೊಟೇಲ್ ನೊಳಗಿನಿಂದಲೇ ಈ ಶಾಸಕರನ್ನು ಬಿಜೆಪಿಗೆ ಸೆಳೆಯುವ ಅಥವಾ ವಿಶ್ವಾಸಮತಕ್ಕೆ ಹಾಜರಾಗದಂತೆ ನೋಡಿಕೊಳ್ಳುವ ಎಲ್ಲಾ ತೆರೆಮರೆಯ ಯತ್ನಗಳು ನಡೆಯುತ್ತಿದೆ ಹಾಗು ಈ ಮೂಲಕ ರಾಷ್ಟ್ರಪತಿ ಆಡಳಿತ ಹೇರಿಕೆಗೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

ಯಾವುದಕ್ಕೂ ಇನ್ನೆರಡು ದಿನ ಕಾದು ನೋಡಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News