ಬಿಎಸ್‌ವೈಗೆ ಈ ಹಿಂದೆ ನಾನು ಲಿಂಗಾಯತನೆಂದು ಗೊತ್ತಿರಲಿಲ್ಲವೇ?: ಶಾಸಕ ಬಿ.ಸಿ.ಪಾಟೀಲ್

Update: 2018-05-21 12:50 GMT

ಬೆಂಗಳೂರು, ಮೇ 21: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಕ್ಷೇತ್ರಕ್ಕೆ ಅನುದಾನ ನೀಡಲು ಹಿಂದೇಟು ಹಾಕಿದ್ದರು. ಆಗ ನಾನು ಲಿಂಗಾಯತ ಮುಖಂಡನೆಂದು ಅವರಿಗೆ ನೆನಪಿರಲಿಲ್ಲವೇ? ಎಂದು ಹಿರೇಕೆರೂರು ಕ್ಷೇತ್ರ ಶಾಸಕ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.

ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ಸಿ.ಪಾಟೀಲ್, ನಾನು ಸೇರಿ ಕಾಂಗ್ರೆಸ್ ಪಕ್ಷದ ಹಲವು ಶಾಸಕರನ್ನು ಬಿಜೆಪಿ, ಲಿಂಗಾಯತ ಸಮುದಾಯವನ್ನು ಮುಂದಿಟ್ಟುಕೊಂಡು ಸೆಳೆಯಲು ವಿಫಲ ಯತ್ನ ನಡೆಸಿತು. ಆದರೆ, ಬಿಎಸ್‌ವೈ ಈ ಹಿಂದೆ ನಾನು ಲಿಂಗಾಯತ ಸಮುದಾಯಕ್ಕೆ ಸೇರಿದವನೆಂದು ಗೊತ್ತಿರಲಿಲ್ಲವೇ ಎಂದು ಕೇಳಿದರು.

ವಿಶ್ವಾಸಮತ ಯಾಚನೆ ವೇಳೆ ವಿಧಾನಸಭೆಯಲ್ಲಿಯೇ ಯಡಿಯೂರಪ್ಪ, ನಾನು ಸೇರಿ ಕಾಂಗ್ರೆಸ್ ಪಕ್ಷದ ಕೆಲ ಶಾಸಕರನ್ನು ಸಂಪರ್ಕಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ನನ್ನ ಜೊತೆ ಯಡಿಯೂರಪ್ಪ, ಮುರಳೀಧರ ರಾವ್ ಮತ್ತು ಶ್ರೀರಾಮುಲು ಮಾತನಾಡಿದ್ದು ನಿಜ, ಎಲ್ಲರ ಧ್ವನಿಯೂ ಆಡಿಯೋ ಕ್ಲಿಪ್‌ಗಳಲ್ಲಿ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ರಾಜಕೀಯ ಪ್ರವೇಶಕ್ಕೂ ಮುನ್ನ ನಾನೊಬ್ಬ ಪೊಲೀಸ್ ಅಧಿಕಾರಿಯಾಗಿ ಕೆಲಸ ಕಾರ್ಯ ನಿರ್ವಹಿಸಿದ ವ್ಯಕ್ತಿ ಎಂದ ಅವರು, ಹಿರೇಕೆರೂರು ಕ್ಷೇತ್ರದಿಂದ 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹಾವೇರಿ ಜಿಲ್ಲೆಯಲ್ಲಿ ನಾನೊಬ್ಬನೇ ಗೆಲುವು ಕಂಡಿದ್ದೇನೆ. ಸಹಜವಾಗಿ ಸಚಿವ ಸ್ಥಾನದ ನಿರೀಕ್ಷೆಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News