ವಿಜಯಪುರದಲ್ಲಿ ಸಿಕ್ಕ ವಿವಿ ಪ್ಯಾಟ್‌ಗಳು ಆಯೋಗಕ್ಕೆ ಸಂಬಂಧಿಸಿದ್ದಲ್ಲ: ಸಂಜೀವ್‌ ಕುಮಾರ್

Update: 2018-05-21 13:02 GMT

ಬೆಂಗಳೂರು, ಮೇ 21: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ದೊರೆತಿರುವ ವಿವಿಪ್ಯಾಟ್‌ನ ಖಾಲಿ ಬಾಕ್ಸ್‌ಗಳು, ರಾಜ್ಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿರುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ರಾಜ್ಯ ಚುನಾವಣೆ ಆಯೋಗದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದವರು ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಪತ್ತೆಯಾಗಿರುವ ವಿವಿಪ್ಯಾಟ್‌ನ ಖಾಲಿ ಬಾಕ್ಸ್‌ಗಳಲ್ಲಿ ಯಾವುದೇ ರೀತಿಯ ಮಷೀನ್ ಇರಲಿಲ್ಲ. ಹಾಗೆಯೇ, ಪೇಪರ್ ಕೂಡ ಇಲ್ಲ. ಜೊತೆಗೆ ಇವುಗಳ ಮೇಲೆ ಯೂನಿಕ್ ಐಡಿ ಸಂಖ್ಯೆ ಇರುವುದಿಲ್ಲ ಎಂದು ತಿಳಿಸಿದರು.

ದೊರೆತಿರುವ ವಿವಿಪ್ಯಾಟ್‌ನ ಖಾಲಿ ಬಾಕ್ಸ್‌ಗಳಿಗೆ ಸಂಬಂಧಿಸಿದಂತೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವವರ ಬಗ್ಗೆ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಚುನಾವಣಾಧಿಕಾರಿಗಳು ಎಚ್ಚರಿಸಿದ್ದಾರೆ.

ಮೇ 20ರಂದು ಮನಗೂಳಿ ಗ್ರಾಮದಲ್ಲಿ ವಿವಿಪ್ಯಾಟ್ ದೊರೆತಿವೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ 8 ವಿವಿಪ್ಯಾಟ್‌ನ ಖಾಲಿ ಬಾಕ್ಸ್‌ಗಳು ಮಾತ್ರ ದೊರೆತಿದ್ದವು. ಅಲ್ಲದೆ ಸ್ಥಳದಲ್ಲಿ ಯಾವುದೇ ವಿವಿಪ್ಯಾಟ್ ಮಷೀನ್‌ಗಳು ಲಭ್ಯವಾಗಿರುವುದಿಲ್ಲ ಮತ್ತು ಜಿಲ್ಲೆಗೆ ಹಂಚಿಕೆಯಾಗಿದ್ದ 2744 ವಿವಿಪ್ಯಾಟ್‌ಗಳು ಸುರಕ್ಷಿತವಾಗಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರ ಪಡಿಸಿಟ್ಟುಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ಮುಖ್ಯ ಚುನಾವಣಾಧಿಕಾರಿಗಳು ಹೇಳಿದರು.

ಈ ಸಂಬಂಧ ಬಸವನಬಾಗೇವಾಡಿಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News