ನಿಮಗಾಗಿ ಬದುಕುವುದೇ ನನ್ನ ಬದುಕು !

Update: 2018-05-21 14:14 GMT

ಬೆಂಗಳೂರು, ಮೇ 21: ‘ಸದ್ಯಕ್ಕೆ ಸ್ವಲ್ಪ ತಾಳ್ಮೆಯಿಂದಿರಿ. ಮನೆಯವರೊಂದಿಗೆ ಕಾಲ ಕಳೆಯಿರಿ. ಮತ್ತೆ ನಾನು ನಿಮ್ಮೊಂದಿಗೆ ಬರುತ್ತೇನೆ. ಸ್ವಸ್ಥ, ಸದೃಢ, ಸಮರ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಸಾಗೋಣ. ನಾನು ದಣಿದಿಲ್ಲ. ನಿಮಗಾಗಿ ಬದುಕುವುದೇ ನಮ್ಮ ಬದುಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಿಗೆ ಟ್ವಿಟರ್ ಮೂಲಕ ಅಭಯ ನೀಡಿದ್ದಾರೆ.

ಸೋಮವಾರ ‘ನಿಮಗಾಗಿ ಬದುಕುವುದೇ ನನ್ನ ಬದುಕು’! ಎಂಬ ಶೀರ್ಷಿಕೆಯ ಟ್ವಿಟರ್ ಲಿಂಕ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಹಾಕಿರುವ ಬಿಎಸ್‌ವೈ, ನಾವು ಬದುಕುತ್ತಿರುವುದೇ ಪ್ರಜಾಪ್ರಭುತ್ವದಲ್ಲಿ. ಅರ್ಥಾತ್, ಇಲ್ಲಿ ಪ್ರಜೆಗಳೇ, ಅಂದರೆ ನೀವೇ ಪ್ರಭುಗಳು. ನಿಮ್ಮನ್ನು ಬಿಟ್ಟು ಸಮಾಜ ಇಲ್ಲ. ಆದರೆ ಇಂದು ಆ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಬಿದ್ದಿದೆ. 104ಕ್ಕಿಂತ 37 ಮತ್ತು 78 ಕ್ಷೇತ್ರಗಳ ನಿಮ್ಮ ಪ್ರತಿನಿಧಿಗಳೇ ನಿಮ್ಮನ್ನಾಳಲು ತಯಾರಾಗಿದ್ದಾರೆ. ಜನಾದೇಶಕ್ಕೆ, ಜನರ ಅಭಿಪ್ರಾಯಕ್ಕೆ ಬೆಲೆ ಇಲ್ಲ, ಕೇವಲ ಸಂಖ್ಯೆಗಳಿಗಷ್ಟೇ ಮಹತ್ವ ಎಂದು ಸಾಬೀತು ಮಾಡಿದ್ದಾರೆ. ಇದರಿಂದ ಒಂದು ದಕ್ಷ, ಸುಭದ್ರ, ಪಾರದರ್ಶಕ, ಪ್ರಾಮಾಣಿಕ ಆಡಳಿತವನ್ನು ನೀಡುವ ಅವಕಾಶವನ್ನು ನಾನು ಕಳೆದುಕೊಂಡಿದ್ದೇನೆ. ಎಲ್ಲರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಜನರ ಪ್ರೀತಿ ಗೆದ್ದ ಪಕ್ಷವಾಗಿ, ಸರಕಾರವನ್ನು ರಚಿಸಬೇಕಾದದ್ದು ನಮ್ಮ ಜವಾಬ್ದಾರಿ. ನಾವು ಏಕೆ ಯಶಸ್ವಿಯಾಗಲಿಲ್ಲವೆಂದು ಜಗತ್ತಿಗೇ ತಿಳಿದಿದೆ. ಜನರಿಂದ ತಿರಸ್ಕೃತಗೊಂಡ ಎರಡು ಪಕ್ಷಗಳು ನಮ್ಮ ವಿರುದ್ಧ ಪಿತೂರಿ ಮಾಡಿವೆ.

ನಾನಿನ್ನೂ ದಣಿದಿಲ್ಲ. ದಣಿಯುವುದೂ ಇಲ್ಲ. ‘ಧಣಿ’ ಎಂದು ನೀವು ಕರೆದ ಮೇಲೆ ನಿಮ್ಮ ಜೊತೆ ನಿಮ್ಮ ಧ್ವನಿಯಾಗಿ ಇರುವುದೇ ನನ್ನ ಕಾಯಕ. ಈ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಾಲು-ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ನನಗೆ ಸಹಿಸಲಾಗಲಿಲ್ಲ. ನಮಗೆ ಅಧಿಕಾರವಿಲ್ಲದಿದ್ದರೂ, ರೈತರಿಗೇನಾದರೂ ಆದರೆ...ಈಗಲೂ ಅದೇ ಆಕ್ರೋಶ ನನ್ನನ್ನು ಆವರಿಸುತ್ತದೆ.

ನಮ್ಮ ರೈತರು ಗರ್ವದಿಂದ ‘ನಾನು ರೈತ’ ಎಂದು ಹೇಳಿಕೊಳ್ಳುವ ಹಾಗೆ ಮಾಡುವುದು ನನ್ನ ಸರಕಾರದ ಆಶಯವಾಗಿತ್ತು. ಈಗಲೂ ಹಾಗೇ ಇದೆ. ನಾವು ಖುದ್ದು ಕೆಲಸ ಮಾಡಲಾಗದೇ ಇದ್ದರೂ ವಿರೋಧ ಪಕ್ಷದಲ್ಲಿ ಕುಳಿತು ಮಾಡಿಸುತ್ತೇವೆ. ಏಕೆಂದರೆ, ನಾನು ನಿಮ್ಮವನು, ನಿಮ್ಮಲ್ಲಿ ಒಬ್ಬನು.

ಯಾವ ಜನ್ಮದ ಪುಣ್ಯವೋ ಏನೋ, ನಿಮ್ಮಂಥ ಕಾರ್ಯಕರ್ತರು, ಬೆಂಬಲಿಗರನ್ನು, ಮನತುಂಬಿ ಹರಸುವ ಜನರನ್ನು ನಾನು ಪಡೆದಿದ್ದೇನೆ. ನಿಮ್ಮ ಪ್ರೀತಿಯನ್ನು ಸಂಪಾದಿಸಿದ್ದೇನೆ. ಗುಮಾಸ್ತನನ್ನು ನಾಯಕನನ್ನಾಗಿ ಮಾಡಿದವರು ನೀವು. ಈಗಲೂ ಅಷ್ಟೇ, ನೀವು ನನ್ನ ಕೈ ಬಿಟ್ಟಿಲ್ಲ. ಇನ್ನಷ್ಟು ಬಲಪಡಿಸಿದ್ದೀರಿ, ಗೆಲ್ಲಿಸಿದ್ದೀರಿ. ಆದರೆ, ವಿಪಕ್ಷಗಳ ಪ್ರಜಾಪ್ರಭುತ್ವ ವಿರೋಧಿ ತಂತ್ರ, ಕುತಂತ್ರಗಳಿಂದ ಸರಕಾರ ರಚಿಸಲಾಗಲಿಲ್ಲ. ಆದರೇನಂತೆ? ನಾನು ಬದುಕಿರುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇನೆ. ರೈತರಿಗಾಗಿ ಶ್ರಮಿಸುತ್ತಲೇ ಇರುತ್ತೇನೆ.

ಬಂಧುಗಳೇ, ನಾನು ಪರಿವರ್ತನಾ ಯಾತ್ರೆಯಲ್ಲಿ ಕೊಟ್ಟ ಕರೆಗೆ ನೀವೆಲ್ಲ ಬಂದಿದ್ದೀರ, ದುಡಿದಿದ್ದೀರಿ. ಅಂದು ನೀವು ಪಟ್ಟ ಶ್ರಮ, ಇಂದು ನೀವು ಹಾಕಿದ ಕಣ್ಣೀರು ಯಾವುದೂ ವ್ಯರ್ಥವಾಗುವುದಕ್ಕೆ ನಾನು ಬಿಡುವುದಿಲ್ಲ. ನೀವ್ಯಾರೂ ಎದೆಗುಂದಬೇಡಿ. ನೀವು ಧೈರ್ಯದಿಂದ ಇದ್ದರೆ ನನ್ನ ಧೈರ್ಯ ನೂರ್ಮಡಿಯಾಗುತ್ತದೆ.

'ಹೆದರದಿರಿ. ನನ್ನ ಚಿಂತೆ ಬಿಡಿ. ಆ ಒಂದು ದಿನ ಬರುತ್ತದೆ. ಸತ್ಯದ ಕಮಲ, ಸಜ್ಜನರ ಮೊಗದಲ್ಲಿ ನಗು ಎರಡೂ ಅರಳುತ್ತದೆ. ಬಿಜೆಪಿ ಬರಲಿದೆ' ಎಂದು ಯಡಿಯೂರಪ್ಪ ಆಶಯವನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News