ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ರಾಜಕೀಯ ಲಾಭ ಬಯಸುವುದು ಸರಿಯಲ್ಲ: ನಟ ಚೇತನ್

Update: 2018-05-21 15:02 GMT

ಬೆಳಗಾವಿ, ಮೇ 21: ‘ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯವಾಗಿ ಲಾಭ ಆಗಬೇಕಿತ್ತು ಎಂದು ಬಯಸುವುದು ಸರಿಯಲ್ಲ’ ಎಂದು ಚಿತ್ರನಟ ಚೇತನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೇ ಬೇರೆ. ಚುನಾವಣಾ ರಾಜಕಾರಣವೇ ಬೇರೆ. ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ಕಾಂಗ್ರೆಸಿಗೆ ಲಾಭ ಆಗಬೇಕಿತ್ತು ಎನ್ನುವುದು ಸಲ್ಲ ಎಂದರು.

ಧರ್ಮದ ಬಳಕೆ ಸಲ್ಲ: ಯಾವುದೇ ಅಭ್ಯರ್ಥಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ಸೋತಿದ್ದಾರೆ ಅಥವಾ ಗೆದ್ದಿದ್ದಾರೆ ಎನ್ನಲು ಆಗದು. ಧರ್ಮವನ್ನು ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ದೊರೆಯಬೇಕೆನ್ನುವುದನ್ನು ಶೇ.60ರಷ್ಟು ಲಿಂಗಾಯತರು ಬೆಂಬಲಿಸುತ್ತಾರೆನ್ನುವ ಅಂಶ ಸಮೀಕ್ಷೆಯಿಂದ ಹೊರಬಿದ್ದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಲಿತರು, ಪ್ರಗತಿಪರರೂ ಈ ಹೋರಾಟ ಬೆಂಬಲಿಸಿದ್ದಾರೆ ಎಂದರು.

ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ರಾಜಕಾರಣಿಗಳನ್ನು ದೂರವಿಟ್ಟು, ಜನರ ಹೋರಾಟವನ್ನಾಗಿ ಮುಂದುವರಿಸಬೇಕು. ಕಾರ್ಯಕರ್ತನಾಗಿ ದುಡಿಯಲು ನಾನೂ ಸಿದ್ಧವಿದ್ದೇನೆ ಎಂದು ಚೇತನ್ ಇದೇ ವೇಳೆ ನುಡಿದರು.

‘ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ನನ್ನನ್ನು ಖಳನಾಯಕನಂತೆ ಬಿಂಬಿಸಲಾಗುತ್ತಿದೆ. ಇದು ಹಿಂದುತ್ವ ಮತ್ತು ವೈದಿಕ ಬ್ರಾಹ್ಮಣ್ಯದ ಹುನ್ನಾರ. ಇದು ಹಿಂದೂ ಧರ್ಮಕ್ಕೆ ವಿರುದ್ಧವಾದುದು. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮ ವಿರೋಧ ವ್ಯಕ್ತಪಡಿಸಲಾಗುತ್ತಿದೆ’

-ಚೇತನ್ ಚಿತ್ರನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News