ಕೋಮುವಾದದ ವಿರುದ್ಧ ಬಲಿಷ್ಠ ಚಳವಳಿ ರೂಪಗೊಳ್ಳಬೇಕು: ಕೆ.ಎಲ್.ಅಶೋಕ್

Update: 2018-05-21 15:21 GMT

ಬೆಂಗಳೂರು, ಮೇ 21: ಕಾರ್ಪೋರೇಟ್ ವ್ಯವಸ್ಥೆಯನ್ನು ಹಾಗೂ ಕೋಮುವಾದವನ್ನು ಸೋಲಿಸುವುದು ಅತ್ಯಂತ ಶ್ರಮದಾಯಕವಾದುದಾಗಿದ್ದು, ಅದರ ವಿರುದ್ಧ ಬಲಿಷ್ಠವಾದ ಚಳವಳಿ ರೂಪಗೊಳ್ಳಬೇಕಿದೆ ಎಂದು ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ನಗರದ ದಾರುಸ್ಸಾಲಮ್ ಕಟ್ಟಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿಯನ್ನು ಕೇವಲ ಒಂದು ರಾಜಕೀಯ ಪಕ್ಷವಾಗಿ ಪರಿಗಣಿಸಬಾರದು. ಅದೊಂದು ದೇಶಕ್ಕೆ ಅಂಟಿಕೊಂಡಿರುವ ಸಾಮಾಜಿಕ ಪಿಡುಗಾಗಿದೆ. ಅದನ್ನು ದೇಶದಿಂದ ದೊರದೂಡಲು ಕೋಮುವಾದವನ್ನು ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳು ಒಟ್ಟುಗೂಡಬೇಕಿದೆ. ಅದಕ್ಕಾಗಿ ಪರ್ಯಾಯ ಕಾರ್ಯತಂತ್ರ ರೂಪಗೊಳ್ಳಬೇಕಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಸ್ತಾನ, ಛತ್ತೀಸ್‌ಘಡ ಹಾಗೂ ಇನ್ನಿತರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕದ ಮಾದರಿಯನ್ನು ಅಳವಡಿಸಿಕೊಂಡು ಮುಂದುವರಿಯಲು ಸಾಧ್ಯವಾಗುವಂತೆ ಕಾರ್ಯಕ್ರಮ ರೂಪಿಸಬೇಕು. ಅದಕ್ಕಾಗಿ ಅಲ್ಲಿನ ಕಾರ್ಯಕರ್ತರ ನೆರವು ಪಡೆದು, ಮೋದಿ ವಿರೋಧಿಗಳನ್ನು ಸೃಷ್ಟಿಸಬೇಕಿದೆ ಎಂದು ಅವರು ತಿಳಿಸಿದರು.

ಹಿರಿಯ ಸಾಹಿತಿ ಡಾ.ವಿಜಯಮ್ಮ ಮಾತನಾಡಿ, ರಾಜ್ಯದಲ್ಲಿ ಬಹಳಷ್ಟು ರಾಜಕೀಯದಾಟ ನಡೆದ ನಂತರ ಪ್ರಜಾಪ್ರಭುತ್ವವನ್ನು ಧಿಕ್ಕಿರಿಸಿ ಅಧಿಕಾರ ಹಿಡಿಯಲು ಯತ್ನಿಸಿದ ಕೋಮುವಾದಿಗಳಿಗೆ ಸೋಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಲು ಮುಂದಾಗಿದ್ದು, ಅದರ ಬಗ್ಗೆಯೂ ಆತಂಕವಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಹಾಗೂ ಜನರ ಪರಿಶ್ರಮದಿಂದ ಅಲ್ಪ ಪ್ರಮಾಣದಲ್ಲಿ ನಾವು ಗೆದ್ದಿದ್ದೇವೆ. ಆದರೆ, ಇದೀಗ ಅಧಿಕಾರಕ್ಕೆ ಬರುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಎಷ್ಟು ದಿನಗಳ ಕಾಲ ಉಳಿಯುತ್ತದೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಹೀಗಾಗಿ, ಬಿಜೆಪಿ ನಡೆಸುವ ಕುದುರೆ ವ್ಯಾಪಾರ ತಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆ ಮೇಲೆ ಇಂದಿನ ಮೈತ್ರಿ ಪ್ರಧಾನ ಪಾತ್ರ ವಹಿಸಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಮುಂದಕ್ಕೆ ಸಾಗಬೇಕು ಎಂದು ಅವರು ಎಚ್ಚರಿಸಿದರು.

ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಮುಖಂಡ ಬಾಬು ಮ್ಯಾಥ್ಯೂ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಸುದ್ದಿ ಮಾಧ್ಯಮಗಳನ್ನು ಖರೀದಿ ಮಾಡಲಾಗಿತ್ತು. ಅಲ್ಲದೆ, ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ, ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ ಹಾಗೂ ಪರ್ಯಾಯ ಮಾಧ್ಯಮವನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಇರ್ಶಾದ್ ಅಹಮದ್ ದೇಸಾಯಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಟಿಪ್ತು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಅಬ್ದುಲ್ ಖುರೇಷಿ, ಜನಶಕ್ತಿಯ ಗೌರಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News