ಗಿರಡ್ಡಿ ಗೋವಿಂದರಾಜ ತಟಸ್ಥ ಮನೋಭಾವದ ಮೇಧಾವಿ: ಪ್ರೊ.ಚಂಪಾ

Update: 2018-05-21 15:24 GMT

ಬೆಂಗಳೂರು, ಮೇ 21: ವಿಮರ್ಶಕ ಪ್ರೊ.ಗಿರಡ್ಡಿ ಗೋವಿಂದರಾಜ ತಟಸ್ಥ ಮನೋಭಾವವುಳ್ಳ ಮೇಧಾವಿ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ನೆನಪು ಮಾಡಿಕೊಂಡರು.

ಸೋಮವಾರ ಕರ್ನಾಟಕ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಮರ್ಶಕ ಪ್ರೊ.ಗಿರಡ್ಡಿ ಗೋವಿಂದರಾಜ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಿರಡ್ಡಿಯವರು ಆರು ದಶಕಗಳ ಕಾಲ ನಿರಂತರವಾಗಿ ನುಡಿಗಳ ಮೂಲಕ ಕನ್ನಡಕ್ಕೆ ಸೇವೆ ಮಾಡಿದ್ದಾರೆ. ಅವರಲ್ಲೊಬ್ಬ ಮಹಾನ್ ಮೇಧಾವಿಯಿದ್ದ ಎಂದರು.

ಗಿರಡ್ಡಿ ಅವರ ಕೊನೆಯ ಮುಖ ದರ್ಶನಕ್ಕೆ ಹೋದಾಗ ಅವರ ಪತ್ನಿ ಸರೋಜ ಅವರು, ನೋಡಿ ನಿಮ್ಮ ಗೆಳಯ ಹೇಗೆ ಮಲಗಿದ್ದಾನೆ ಎಂದು ಹೇಳಿದರು. ನಾನು ಗೆಳೆಯನ ಮುಖವನ್ನು 5 ನಿಮಿಷ ನೋಡುತ್ತಾ ಕುಳಿತೆ. ಆ ಮುಖದಲ್ಲೂ ಅದೇ ನಿರ್ಲಿಪ್ತ ಭಾವವಿತ್ತು ಎಂದು ಚಂಪಾ ಹೇಳಿದರು.

ಸಂಕ್ರಮಣ ಪತ್ರಿಕೆ ಆರಂಭವಾದ ದಿನದಿಂದ ಇತ್ತೀಚೆಗೆ ಮೂಡಿಬಂದ ಸಂಚಿಕೆಯವರಿಗೂ ಜತೆಗಿದ್ದರು. ಇಷ್ಟು ದೀರ್ಘಕಾಲ ಪತ್ರಿಕೆ ಉಳಿಯಬೇಕಾದರೆ ಅವರೇ ಸ್ಫೂರ್ತಿ. ನನ್ನೊಳಗಿನ ಭಾವಗೀತೆಯನ್ನು ಹೊರತಂದವರು ಗಿರಡ್ಡಿ. ಸಾಹಿತ್ಯ ಚಳವಳಿಯಲ್ಲಿ ಎಡ-ಬಲವಿಲ್ಲದ ಮಧ್ಯಪಂಥೀಯ ಸಾಹಿತ್ಯ ಪ್ರಬಲ ಪ್ರತಿಪಾದಕ. ಅವರು ಮಾನವೀಯತೆಯ ಕರುಳನ್ನು ಹೊಂದಿದ್ದರು ಎಂದು ಸ್ಮರಿಸಿಕೊಂಡರು.

ಗಿರಡ್ಡಿಯವರಲ್ಲಿ ಶಿಸ್ತು, ಪ್ರಾಮಾಣಿಕತೆ, ಆದರ್ಶಗಳು ಸದಾ ಹರಿಯುತ್ತಿದ್ದ ದೊಡ್ಡ ನದಿಯಂತಿದ್ದವು. ಗೋಕಾಕ್ ಚಳವಳಿಯಿಂದ ಕೋಮುವಾದಿ ವಿರೋಧಿ ಚಳುವಳಿಯವರೆಗೂ ನಡೆದಿರುವ ಯಾವುದೇ ಚಳವಳಿಯಲ್ಲಿ ಪಾಲ್ಗೊಳ್ಳಲು ಅವರಲ್ಲಿ ಹಿಂಜರಿಕೆಯಿತ್ತು. ಅವರಲ್ಲಿ ಯಾವುದೇ ಸಿದ್ಧಾಂತಗಳಿರಲಿಲ್ಲ. ಅವರು ತಟಸ್ಥ ಮನೋಭಾವವುಳ್ಳ ಮೇಧಾವಿಯಾಗಿದ್ದರು ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಗಿರಡ್ಡಿ ಅವರ ಹಠಾತ್ ಸಾವಿನ ಸುದ್ದಿ ಕೇಳಿ ತಬ್ಬಿಬ್ಬಾದೆ. ಅವರ ವಿಮರ್ಶೆಯಲ್ಲಿ ಗೌರವದಿಂದ ಕೂಡಿದ ವಾಗ್ವಾದವಿತ್ತು. ವೈರುದ್ಯಗಳನ್ನು ಒತ್ತಿಗಿಟ್ಟು ಸ್ನೇಹವನ್ನು ಉಳಿಸಿಕೊಳ್ಳುವ ವ್ಯಕ್ತಿತ್ವ ಅವರಲ್ಲಿತ್ತು. ಅವರನ್ನು ಕಳೆದುಕೊಂಡಿರುವ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು.

ವಿಮರ್ಶಕ ಸಿ.ಎನ್.ರಾಮಚಂದ್ರನ್ ಮಾತನಾಡಿ, ಕನ್ನಡ ವಿಮರ್ಶಾ ಲೋಕ್ಕಕೆ ಪಾರಿಭಾಷಿಕ ಪದಗಳ ಬದಲಾಗಿ ಕನ್ನಡ ಪದಗಳನ್ನೇ ಸೃಷ್ಟಿ ಚಲಾವಣೆಗೆ ತಂದರು. ಜಾತ್ಯತೀತ ಮನೋಭಾವವುಳ್ಳ, ಸರಳ ಸಜ್ಜನರಾಗಿದ್ದ ಪ್ರೊ. ಗಿರಡ್ಡಿ ಗೋವಿಂದರಾಜರನ್ನು ಕಳೆದುಕೊಂಡಿರುವುದು ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ನಷ್ಟವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ವಿಮರ್ಶಕ ದಂಡಪ್ಪ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News