"ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ಸಂಭ್ರಮಿಸುತ್ತಿದ್ದೇವೆ"

Update: 2018-05-21 16:11 GMT

ಬೆಂಗಳೂರು, ಮೇ 21: ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ನಾಳೆಗೆ (ಮಂಗಳವಾರ) ಒಂದು ವಾರವಾಗುತ್ತಿದ್ದರೂ ಕರ್ನಾಟಕದ ಜನರ ಪಾಲಿಗೆ ಕಣ್ಮರೆಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ದಿಢೀರ್ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿ ನಮ್ಮ ಮೈತ್ರಿ ಕೂಟವನ್ನು ಟೀಕಿಸಿ, ನೀವು ಏನನ್ನು ಸಂಭ್ರಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಜಾತ್ಯತೀತ ಸರಕಾರವೊಂದನ್ನು ರಚಿಸುತ್ತಿರುವ ಕಾರಣಕ್ಕಾಗಿ ಮತ್ತು ಧರ್ಮದ ಆಧಾರದಲ್ಲಿ ಜನ, ಸಮುದಾಯಗಳನ್ನು ಒಡೆದು ಆಳುವ ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ ಎಂದು ಅಮಿತ್ ಶಾಗೆ ಅವರು ತಿರುಗೇಟು ನೀಡಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಪವಿತ್ರ ಎಂಬುದು ನಿಮ್ಮ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು ಪವಿತ್ರವಾದ ಕಾರ್ಯವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ

ಬಹುಮತವಿಲ್ಲದ ಸರಕಾರವನ್ನು ಉಳಿಸಿಕೊಳ್ಳಲು ಬೇರೆ ಪಕ್ಷಗಳ ಶಾಸಕರನ್ನು ಖರೀದಿಸಲು ಹೊಂಚು ಹಾಕಿದ್ದು, ಅವರಿಗೆ ನೂರು ಕೋಟಿ ರೂ.ಆಮಿಷ ಒಡ್ಡಿದ್ದು, ಅವರ ಮೂಲಕ ರಾಜೀನಾಮೆ ಕೊಡಿಸಲು ಪ್ರಯತ್ನಿಸಿದ್ದು ಅಪವಿತ್ರ ಕಾರ್ಯವಲ್ಲವೇ? ಒಬ್ಬೊಬ್ಬ ಶಾಸಕರನ್ನು ಖರೀದಿಸಲು ನೂರು ಕೋಟಿ ರೂ.ಖರ್ಚು ಮಾಡಲು ನಿರ್ಧರಿಸಿದ್ದ ನಿಮ್ಮ ಪಕ್ಷ ಆ ದುಡ್ಡನ್ನು ಎಲ್ಲಿಂದ ಹೊಂದಿಸಿತ್ತು? ಅದು ಸಕ್ರಮ ಹಣವೋ? ಅಕ್ರಮವೋ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ನಿಮಗೂ ಕೂಡ. ಆ ಕಾರಣಕ್ಕಾಗಿಯೇ ಜಾತ್ಯತೀತ ತತ್ವದ ಅಡಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ. ನಮ್ಮ ಮೈತ್ರಿಗೆ ಒಂದು ನೆಲೆ ಇದೆ. ಸರ್ವರ ಹಿತ ಕಾಯುವ, ಎಲ್ಲರನ್ನೂ ಒಳಗೊಂಡಂತೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ನಮ್ಮ ಈ ಮೈತ್ರಿ ಕೂಟದ ಮೂಲ ನೆಲೆ. ಅದನ್ನು ಅಪವಿತ್ರ ಮೈತ್ರಿ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರವಾದದ್ದುದೆಂದು ನಾನು ಭಾವಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿಗೆ ಬಹುಮತವಿಲ್ಲ ಎಂದು ತಿಳಿದಿದ್ದರೂ, ಸರಕಾರ ರಚಿಸಿದರೆ ಅದು ಉರುಳುತ್ತದೆ ಎಂದು ಗೊತ್ತಿದ್ದರೂ, ಆತುರಕ್ಕೆ ಬಿದ್ದವರಂತೆ ಬಿ.ಎಸ್.ಯಡಿಯೂರಪ್ಪ ರನ್ನುಮುಖ್ಯಮಂತ್ರಿಯನ್ನಾಗಿ ಮಾಡಿದಿರಿ. ಕೊನೆಗೆ ಅವರು ರಾಜೀನಾಮೆ ನೀಡುವಂತೆ ಮಾಡಿ ಅವರಿಗೆ ಅಪಮಾನ ಮಾಡಿದಿರಿ. ಈ ಮೂಲಕ ಅವರು ಪ್ರತಿನಿಧಿಸುವ ಸಮುದಾಯವನ್ನೇ ಬಿಜೆಪಿ ಅಪಮಾನ ಮಾಡಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪ ಮೇಲೆ ಅಷ್ಟು ಕಾಳಜಿ ಇದ್ದಿದ್ದರೆ ಅಸ್ಥಿರ ಸರಕಾರ ರಚನೆಗೆ ಏಕೆ ಅವಕಾಶ ಮಾಡಿಕೊಟ್ಟಿತು? ಸೋಲಾಗುತ್ತದೆ ಎಂದು ಗೊತ್ತಿದ್ದರೂ ಇಂತಹ ದುಸ್ಸಾಹಸಕ್ಕೆ ಏಕೆ ಕೈ ಹಾಕಿಸಿತು? ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಸಂಭ್ರಮಿಸುವುದು ಬಿಜೆಪಿಯ ಎಂದಿನ ಪರಿಪಾಠವಲ್ಲವೇ? ಅದನ್ನೇ ಯಡಿಯೂರಪ್ಪ ವಿಚಾರದಲ್ಲೂ ಬಿಜೆಪಿ ಮಾಡಿದೆ ಎಂದು ಅವರು ಟೀಕಿಸಿದ್ದಾರೆ.

ಚುನಾವಣೆ ಮುಗಿದಾಗಿನಿಂದಲೂ ನಮ್ಮದು ಏಕೈಕ ದೊಡ್ಡ ಪಕ್ಷ, ನಾವೇ ಸರಕಾರ ಮಾಡಬೇಕಿತ್ತು ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರಕಾರ ರಚಿಸಬೇಕೆ ವಿನಾ ಏಕೈಕ ದೊಡ್ಡ ಪಕ್ಷವಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ ಎಂದು ಬಿಜೆಪಿ ಅರಿಯಲಿ. ಈ ಕನಿಷ್ಠ ವಿಚಾರವನ್ನು ಬಿಜೆಪಿಗೆ ತಿಳಿಸಿಕೊಡಬೇಕಾಗಿ ಬಂದಿರುವುದು ಬೇಸರದ ಸಂಗತಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News