ವೀಸಾ ನಿರಾಕರಿಸಲ್ಪಟ್ಟಿದ್ದ ಸಿಖ್ ಎನ್ನಾರೈಗಳ ಹೆಚ್ಚಿನ ಹೆಸರುಗಳು ಕಪ್ಪುಪಟ್ಟಿಯಿಂದ ಮುಕ್ತ: ರಾಮ ಮಾಧವ

Update: 2018-05-21 17:17 GMT

ವಾಷಿಂಗ್ಟನ್,ಮೇ 21: 80 ಮತ್ತು 90ರ ದಶಕಗಳಲ್ಲಿ ಖಲಿಸ್ತಾನ್ ಆಂದೋಲನದೊಂದಿಗೆ ಗುರುತಿಸಿಕೊಂಡಿದ್ದರೆಂಬ ಆರೋಪದಲ್ಲಿ ಭಾರತಕ್ಕೆ ಪ್ರಯಾಣಿಸಲು ವೀಸಾ ನಿರಾಕರಿಸಲ್ಪಟ್ಟಿದ್ದ ಹೆಚ್ಚಿನ ಅನಿವಾಸಿ ಸಿಕ್ಖ್‌ರ ಹೆಸರುಗಳನ್ನು ಎನ್‌ಡಿಎ ಸರಕಾರವು ಕಪ್ಪುಪಟ್ಟಿಯಿಂದ ತೆಗೆದುಹಾಕಿದ್ದು,ಕೆಲವೇ ಹೆಸರುಗಳು ಉಳಿದುಕೊಂಡಿವೆ. ಅವುಗಳೂ ಕಪ್ಪುಪಟ್ಟಿಯಿಂದ ಮುಕ್ತಿ ಪಡೆಯಲಿವೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರು ಹೇಳಿದ್ದಾರೆ.

ಮೇರಿಲ್ಯಾಂಡ್‌ನ ಅತ್ಯಂತ ಹಳೆಯ ಗುರುದ್ವಾರವೊಂದರಲ್ಲಿ ಅನಿವಾಸಿ ಸಿಖ್ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಅತ್ಯಂತ ಅಮಾನವೀಯವಾದ ಕಪ್ಪುಪಟ್ಟಿಯನ್ನು ನಾವು ಹೆಚ್ಚುಕಡಿಮೆ ತೆಗೆದುಹಾಕಿದ್ದೇವೆ. ಈ ಕಪ್ಪುಪಟ್ಟಿಯಿಂದಾಗಿ ಸಿಖ್ ಸಮುದಾಯಕ್ಕೆ ಭಾರತಕ್ಕೆ ಭೇಟಿ ನೀಡುವ,ಹರ್‌ಮಂದಿರ ಸಾಹೇಬ್‌ಗೆ ಭೇಟಿ ನೀಡುವ ಮತ್ತು ತಮ್ಮ ಸಂಬಂಧಿಕರು,ಪ್ರೀತಿಪಾತ್ರರನ್ನು ಭೇಟಿಯಾಗುವ ಹಕ್ಕು ನಿರಾಕರಿಸಲ್ಪಟ್ಟಿತ್ತು ಎಂದು ಹೇಳಿದರು.

ಭದ್ರತಾ ಏಜೆನ್ಸಿಗಳು ವಿವಿಧ ಮಟ್ಟಗಳಲ್ಲಿ ಈ ಕಪ್ಪುಪಟ್ಟಿಯನ್ನು ಸಿದ್ಧಗೊಳಿಸಿದ್ದು, ಇದು ಅಮೆರಿಕದಲ್ಲಿರುವ ಸಿಖ್ ಸಮುದಾಯಗಳ ಅಸಮಾಧಾನಕ್ಕೆ ಮುಖ್ಯ ಕಾರಣಗಳಲ್ಲೊಂದಾಗಿತ್ತು.

ಈ ವರ್ಷದ ಆರಂಭದಲ್ಲಿ ಅಮೆರಿಕದಲ್ಲಿನ ಹಲವು ಗುರುದ್ವಾರಗಳು ತಮ್ಮ ಸಮುದಾಯವನ್ನುದ್ದೇಶಿಸಿ ಮಾತನಾಡಲು ಭಾರತ ಸರಕಾರದ ಯಾವುದೇ ಅಧಿಕಾರಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಕಟಿಸಿದ್ದವು. ಹೆಚ್ಚಿನ ಗುರುದ್ವಾರಗಳು ನಂತರ ಈ ಕ್ರಮವನ್ನು ನಿರಾಕರಿಸಿದ್ದವು.

1984ರ ಸಿಖ್ ವಿರೋಧಿ ದಂಗೆಗಳ ನೇತೃತ್ವ ವಹಿಸಿದ್ದವರನ್ನು ಕಂಬಿಗಳ ಹಿಂದೆ ತಳ್ಳಲು ಸಾಧ್ಯವಾಗುವಂತೆ ಅವರ ನಿರೀಕ್ಷಣಾ ಜಾಮೀನುಗಳನ್ನು ರದ್ದುಗೊಳಿಸುವಂತೆ ಸರಕಾರವು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದೆ ಎಂದೂ ರಾಮ ಮಾಧವ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News