ಶೇ.33ರಷ್ಟು ಅರ್ಹ ಸಾಲಗಾರರನ್ನು ಮಾತ್ರ ಬ್ಯಾಂಕುಗಳು ತಲುಪಿವೆ: ವರದಿ

Update: 2018-05-21 17:23 GMT

ಮುಂಬೈ,ಮೇ 21: ಕಳೆದೊಂದು ದಶಕದಿಂದ ಚಿಲ್ಲರೆ ಸಾಲಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿದ್ದರೂ ಸಾಲ ಪಡೆಯಲು ಅರ್ಹರಾಗಿರುವ 22 ಕೋಟಿ ಗ್ರಾಹಕರ ಪೈಕಿ ಮೂರನೇ ಒಂದು ಭಾಗದಷ್ಟು ಜನರನ್ನು ಮಾತ್ರ ತಲುಪಲು ಬ್ಯಾಂಕುಗಳಿಗೆ ಸಾಧ್ಯವಾಗಿದೆ ಎಂದು ಸಾಲ ಮಾಹಿತಿ ಸಂಸ್ಥೆ ಟ್ರಾನ್ಸ್‌ಯೂನಿಯನ್ ಸಿಬಿಲ್ ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.

ಇದರಿಂದಾಗಿ ಸಾಲದ ಅರ್ಹತೆ ಹೊಂದಿರುವ 15 ಕೋಟಿ ಗ್ರಾಹಕರು ಬ್ಯಾಂಕ್‌ಗಳ ವ್ಯಾಪ್ತಿಯ ಹೊರಗೇ ಉಳಿದುಕೊಂಡಿದ್ದಾರೆ. 7.2 ಕೋ.ಜನರು ಮಾತ್ರ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿದ್ದಾರೆ ಎಂದು ಅದು ಹೇಳಿದೆ.

ಸಾಲ ವ್ಯಾಪ್ತಿಯಲ್ಲಿರದ 150 ಕೋಟಿ ಜನರು ಸಾಲ ಪಡೆಯಲು ಅಗತ್ಯವಾದ ವಯಸ್ಸು ಮತ್ತು ಆದಾಯದ ಮಾನದಂಡಗಳನ್ನು ಹೊಂದಿದ್ದಾರೆ. ಅವರು ಹಿಂದೆ ಸ್ಪಲ್ಪ ಪ್ರಮಾಣದಲ್ಲಿ ಸಾಲ ಸೌಲಭ್ಯ ಪಡೆದುಕೊಂಡಿದ್ದರೂ ಈಗ ಅವರ ಸಾಲಖಾತೆಗಳು ಸಕ್ರಿಯವಾಗಿಲ್ಲ ಎಂದು ಅದು ತಿಳಿಸಿದೆ.

ಇಂತಹ ಗ್ರಾಹಕರ ವರ್ಗವು ಕ್ರೆಡಿಟ್ ಕಾರ್ಡ್,ವೈಯಕ್ತಿಕ ಸಾಲ,ಗೃಹೋಪಕರಣ ಸಾಲ ಇತ್ಯಾದಿ ಉತ್ಪನ್ನಗಳ ಮೂಲಕ ತಮ್ಮ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಬ್ಯಾಂಕುಗಳಿಗೆ ಉತ್ತಮ ಅವಕಾಶಗಳನ್ನೊದಗಿಸುತ್ತಿದೆ ಮತ್ತು ಇದು ಆರ್ಥಿಕತೆಗೂ ಹೆಚ್ಚಿನ ಉತ್ತೇಜನ ನೀಡುತ್ತದೆ ಎಂದು ಸಿಬಿಲ್ ಉಪಾಧ್ಯಕ್ಷ(ಸಂಶೋಧನೆ ಮತ್ತು ಸಲಹೆ) ಯೋಗೇಂದ್ರ ಸಿಂಗ್ ಅವರು ಹೇಳಿದರು.

ಬ್ಯಾಂಕುಗಳು ಚಿಲ್ಲರೆ ಸಾಲ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬಗ್ಗೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಇದು(ಚಿಲ್ಲರೆ ಸಾಲ) ಅಪಾಯಮುಕ್ತ ವಿಭಾಗವಲ್ಲ ಮತ್ತು ತಮ್ಮ ಕಾರ್ಪೊರೇಟ್ ಸಾಲಗಳ ಸಮಸ್ಯೆಗಳನ್ನು ತಗ್ಗಿಸಿಕೊಳ್ಳಲು ಇದು ಉತ್ತಮ ಅವಕಾಶವೆಂದು ಬ್ಯಾಂಕುಗಳು ಭಾವಿಸುವ ಅಗತ್ಯವಿಲ್ಲ. ಇಲ್ಲಿಯೂ ಸೂಕ್ತ ಪರಿಶೀಲನೆ ಮತ್ತು ಮುನ್ನೆಚ್ಚರಿಕೆ ಅಗತ್ಯವಾಗಿರುವ ಅಪಾಯಗಳಿವೆ ಎಂದು ಆರ್‌ಬಿಐ ಡೆಪ್ಯೂಟಿ ಗವರ್ನರ್ ಎನ್.ಎಸ್.ವಿಶ್ವನಾಥನ್ ಅವರು ಇತ್ತಿಚಿಗೆ ಹೇಳಿದ್ದರು.

ಸಿಬಿಲ್ ಸಾಲ ಪಡೆಯಲು ಅರ್ಹತೆಯನ್ನು ಹೊಂದಿರುವ ಅಂದಾಜು 22 ಕೋಟಿ ಗ್ರಾಹಕರನ್ನು ಗುರುತಿಸಲು 20ರಿಂದ 60 ವರ್ಷ ವಯೋಮಾನ ಮತ್ತು ವಾರ್ಷಿಕ 2.5 ಲ.ರೂ.ಗಳ ಅಧಿಕ ಆದಾಯವನ್ನು ಮಾನದಂಡಗಳನ್ನಾಗಿ ಪರಿಗಣಿಸಿದೆ. ಈ ಸಂಖ್ಯೆ 2022ರ ವೇಳೆಗೆ 29.5 ಕೋಟಿಯನ್ನು ತಲುಪಲಿದೆ ಎಂದೂ ಅದು ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News