ಹಸಿವೆಂಬ ರಾಷ್ಟ್ರೀಯ ವಿಪತ್ತು

Update: 2018-05-22 05:31 GMT

ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುವ ಕನಸು ಕಾಣುತ್ತಿದೆ. ಅದಕ್ಕೆ ಪೂರಕವಾಗಿ ಆರ್ಥಿಕ ಮತ್ತು ತಾಂತ್ರಿಕ ಪ್ರಗತಿಯನ್ನು ದೇಶ ಆಗಾಗ ಘೋಷಿಸಿಕೊಳ್ಳುತ್ತಿದೆ. ಚಂದ್ರನ ಮೇಲೆ ಓಡಾಡುವ, ಮಂಗಳನಲ್ಲಿ ಮನೆ ಹೂಡುವ ಕನಸು ಕಾಣುತ್ತಿದೆ. ಇವೆಲ್ಲವುಗಳ ನಡುವೆಯೂ ಭಾರತದ ದೊಡ್ಡ ಸಂಖ್ಯೆಯ ಜನರು ಒಂದು ತುತ್ತು ಅನ್ನಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿ ಇದೆ. ರಾಜಕೀಯ ಸ್ವಾತಂತ್ರ ದೊರಕಿದೆ ಎಂದು ನಂಬಿರುವ ಈ ದೇಶ, ಹಸಿವಿನಿಂದ ಸ್ವಾತಂತ್ರ ಪಡೆದುಕೊಂಡಿದೆ ಎಂದು ಎದೆ ತಟ್ಟಿ ಹೇಳುವುದಕ್ಕೆ ಅಂಜುವ ಸನ್ನಿವೇಶವಿದೆ. ದೇಶದಲ್ಲಿ ಈಗಲೂ ಶೇ.50ಕ್ಕೂ ಅಧಿಕ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎನ್ನುವುದನ್ನು ಸರಕಾರಿ ಅಂಕಿಅಂಶಗಳು ಹೇಳುತ್ತಿವೆ. 2017-18ರ ಆರ್ಥಿಕ ಸಮೀಕ್ಷೆಯ ಪ್ರಕಾರ ಮಗು ಹಾಗೂ ತಾಯಿಯ ಅಪೌಷ್ಟಿಕತೆಯು ಅಧುನಿಕ ಭಾರತವು ಎದುರಿಸುತ್ತಿರುವ ಅತಿ ದೊಡ್ಡ ಸವಾಲಾಗಿದೆ.

    ಉತ್ತಮ ಗುಣಮಟ್ಟದ ಆಹಾರದ ಅಲಭ್ಯತೆೆ,ಕಳಪೆ ಪೋಷಣೆ ಮತ್ತು ಆಹಾರ ಸೇವನೆಯ ಪದ್ಧತಿ, ಅಸಮರ್ಪಕ ಪ್ರಮಾಣದ ನೀರು ಸೇವನೆ, ನೈರ್ಮಲ್ಯ ಹಾಗೂ ಆರೋಗ್ಯ ಸೇವೆಯ ಕೊರತೆಯ ಪರಿಣಾಮವಾಗಿ ಭಾರತದ ಪ್ರತಿ 10 ಮಂದಿ ಮಕ್ಕಳ ಪೈಕಿ ಮೂವರ ದೈಹಿಕ ಬೆಳವಣಿಗೆ ಕುಂಠಿತವಾಗಿರುತ್ತದೆ. ಅಪೌಷ್ಟಿಕತೆಯು ಮಕ್ಕಳಿಗೆ ಭಾರೀ ಹಾನಿಯನ್ನುಂಟು ಮಾಡುತ್ತವೆ ಹಾಗೂ ಅವರ ಬಾಲ್ಯವನ್ನು ಹಾಳುಗೆಡವುತ್ತಿದೆ. ಅವರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ.ಅನೇಕ ಮಕ್ಕಳಿಗೆ ದೀರ್ಘಕಾಲದ ಅಪೌಷ್ಟಿಕತೆಯು ಅವರು ಗರ್ಭದಲ್ಲಿರುವಾಗಲೇ ಆರಂಭಗೊಳ್ಳುತ್ತದೆ. ಇವರ ಪೈಕಿ ಶೇ.20ರಷ್ಟು ಮಕ್ಕಳು ಕಡಿಮೆ ದೇಹತೂಕದೊಂದಿಗೆ ಜನಿಸುತ್ತವೆ.ಮೆದುಳಿನ ಶೇ.90ರಷ್ಟು ಬೆಳವಣಿಗೆಯು ಜನಿಸಿದ ಮೊದಲ ಎರಡು ವರ್ಷಗಳ ಅವಧಿಯಲ್ಲಾಗುತ್ತವೆ. ಅಪೌಷ್ಟಿಕತೆಯು ಮಕ್ಕಳ ಬುದ್ಧಿಮತ್ತೆಯನ್ನು ಕಡಿಮೆಗೊಳಿಸುತ್ತ್ತಿದೆ ಹಾಗೂ ಭವಿಷ್ಯದಲ್ಲಿ ಮಧುಮೇಹ ಹಾಗೂ ಹೃದ್ರೋಗದಂತಹ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿದೆ. ಭವಿಷ್ಯದಲ್ಲಿ ರೋಗಪೀಡಿತ ಸಮಾಜದ ಸೃಷ್ಟಿಯಿಂದ ದೇಶದ ಉತ್ಪಾದಕತೆಯೂ ಕಡಿಮೆಯಾಗುತ್ತದೆ.

ಭಾರತದಲ್ಲಿ ಶೇ.33.6ರಷ್ಟು ಭಾರತೀಯ ಮಹಿಳೆಯರು ದೀರ್ಘಕಾಲದ ಅಪೌಷ್ಟಿಕತೆಯ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಅವರಲ್ಲಿ ಶೇ.55ರಷ್ಟು ಮಂದಿ ರಕ್ತಹೀನತೆಯಿಂದ ಪೀಡಿತರಾಗಿದ್ದಾರೆ. ಇದರಿಂದಾಗಿ ಹೆರುವ ವಯಸ್ಸಿನೊಳಗಿನ ದೇಶದ ಅರ್ಧಾಂಶದಷ್ಟು ಮಹಿಳೆಯರು ಅಪಾಯಕರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹೀಗೆ ರಕ್ತಹೀನತೆಯ ಕಾಯಿಲೆಯಿಂದಾಗಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಕ್ಕೆ ಅಂದಾಜು 1.50 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ. ಈ ನಷ್ಟವು, ದೇಶದ 2017-18ರ ಸಾಲಿನಲ್ಲಿ ಆರೋಗ್ಯ ಬಜೆಟ್‌ಗೆ ಮೀಸಲಿಟ್ಟ ಅನುದಾನದ ಮೂರು ಪಟ್ಟು ಅಧಿಕವಾಗಿದೆ. ಭಾರತದಲ್ಲಿ ನವಜಾತ ಶಿಶುವಿನ ಕುಟುಂಬವು 45 ತಿಂಗಳ ಅವಧಿಯಲ್ಲಿ 10,332 ರೂ. ವೌಲ್ಯದ ಆಹಾರ ಪಡಿತರವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಭ್ರಷ್ಟಾಚಾರ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪೂರೈಕೆಯಂತಹ ಸಮಸ್ಯೆಗಳನ್ನು ಈ ಯೋಜನೆಯು ಎದುರಿಸುತ್ತಿದೆ.ತೀರಾ ಇತ್ತೀಚೆಗೆ ರಾಷ್ಟ್ರೀಯ ತಾಯ್ತನ ಸೌಲಭ್ಯ ಕಾಯ್ದೆ (ಎನ್‌ಎಂಬಿಎಂ)ಗೆ ತರಲಾದ ತಿದ್ದುಪಡಿಯು, ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಆರು ತಿಂಗಳುಗಳ ರಜೆರಹಿತ ವೇತನವನ್ನು ಕಡ್ಡಾಯಗೊಳಿಸಿದೆ. ಆದರೆ ಇತರ ವಲಯಗಳಲ್ಲಿ ದುಡಿಯುವ ಕೋಟ್ಯಂತರ ಮಹಿಳೆಯರು ಇಂತಹ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸಾಮಾನ್ಯ ವಲಯಗಳಲ್ಲಿ ದುಡಿಯುತ್ತಿರುವ ಶೇ.95ರಷ್ಟು ಮಹಿಳೆಯರು ಬಡವರಾಗಿದ್ದು, ಅವರು ಜೀವನೋಪಾಯಕ್ಕಾಗಿ ಹೆರಿಗೆಯಾದ ಕೆಲವೇ ದಿನಗಳೊಳಗೆ ಉದ್ಯೋಗಕ್ಕೆ ಮರಳಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಅವರು ವಿಶ್ರಾಂತಿ ಪಡೆಯುವುದು, ದೇಹತೂಕವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂಬುದು ಹಾಗೂ ತಮ್ಮ ಮಕ್ಕಳಿಗೆ ಆರು ತಿಂಗಳ ಕಾಲ ಎದೆಹಾಲುಣಿಸಬೇಕೆಂಬುದನ್ನು ನಿರೀಕ್ಷಿಸುವುದು ತುಂಬಾ ಕಷ್ಟ ಸಾಧ್ಯವಾಗಿದೆ. ಒಂದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಈ ದೇಶದ ಸಾಮಾಜಿಕ, ಆರೋಗ್ಯ ಸಮಸ್ಯೆಗಳು ಈ ಅಪೌಷ್ಟಿಕತೆಯೊಂದಿಗೆ ನೇರ ಸಂಬಂಧವನ್ನು ಹೊಂದಿವೆೆ. ಇಂದು ನಾವು ಕ್ಷಯ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳನ್ನು ಪ್ರತ್ಯೇಕವಾಗಿ ನೋಡಿ ಅದನ್ನು ಗುಣ ಪಡಿಸಲು ಹೊರಡುತ್ತೇವೆ. ಆದರೆ ಕ್ಷಯದಂತಹ ರೋಗಗಳ ಮೂಲವೇ ಅಪೌಷ್ಟಿಕತೆ ಎನ್ನುವುದನ್ನು ಮರೆಯುತ್ತೇವೆ. ಭಾರತದಂತಹ ದೇಶದಲ್ಲಿ ಹಸಿವು ಎನ್ನುವುದೇ ಒಂದು ಮಾರಕ ರೋಗ ಅಥವಾ ಹಲವು ಮಾರಕ ರೋಗಗಳನ್ನು ಹುಟ್ಟಿಸುವ ತಾಯಿ ಈ ಅಪೌಷ್ಟಿಕತೆ. ವಿಶ್ವ ಆರೋಗ್ಯಸಂಸ್ಥೆಯ ವರದಿ ಪ್ರಕಾರ ಅಪೌಷ್ಟಿಕತೆಯು ಅತಿಸಾರ (ಡಯೇರಿಯಾ) ಅಥವಾ ಜಂತುಹುಳದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಸುರಕ್ಷಿತ ಕುಡಿಯುವ ನೀರು, ಅಸಮರ್ಪಕ ನೈರ್ಮಲ್ಯ ವ್ಯವಸ್ಥೆ ಹಾಗೂ ನೈರ್ಮಲ್ಯರಹಿತವಾದ ಜೀವನಪದ್ಧತಿಗೂ, ಅಪೌಷ್ಟಿಕತೆಗೂ ಪರಸ್ಪರ ಸಂಬಂಧವಿದೆ. ಇಂತಹ ಆರೋಗ್ಯ ಸಮಸ್ಯೆಗಳು, ಶೈಶವಾವಸ್ಥೆಯಲ್ಲಿ ಶಾರೀರಿಕ ಬೆಳವಣಿಗೆಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಸರಾಸರಿಯಾಗಿ ಭಾರತೀಯರ ದೇಹ ಗಾತ್ರವು, ಕಡಿಮೆ ಪ್ರಮಾಣದ ಕ್ಯಾಲರಿ ಆಹಾರವನ್ನು ಸೇವಿಸುವ ಜಗತ್ತಿನ ಇತರ ಕೆಲವು ಬಡರಾಷ್ಟ್ರಗಳ ಜನರಿಗಿಂತಲೂ ಸಣ್ಣದಾಗಿದೆ. ಸೂಕ್ತ ಆರೈಕೆಗಳಿಲ್ಲದೆ, ಆಹಾರಗಳಿಲ್ಲದೆ ಬೆಳೆದ ದೇಹ ಅತಿ ಬೇಗ ರೋಗಗಳಿಗೆ ಬಲಿಯಾಗುತ್ತದೆ. ಹಸಿವು ಸಾಕ್ಷರತೆಯೊಂದಿಗೂ ನಂಟನ್ನು ಹೊಂದಿದೆ. ಹೊಟ್ಟೆ ತುಂಬಿದ ಬಳಿಕ ಶಿಕ್ಷಣ. ಆದುದರಿಂದಲೇ, ಪಾಲಕರು ತಮ್ಮ ಮಕ್ಕಳು ಆದಷ್ಟು ಬೇಗ ದುಡಿಯಬೇಕು ಎಂದು ಬಯಸುತ್ತಾರೆ. ಬಾಲಕಾರ್ಮಿಕರ ಹೆಚ್ಚಳಕ್ಕೆ ಕಾರಣವೂ ಇದೇ ಆಗಿದೆ. ಅರೆ ಹೊಟ್ಟೆಯಲ್ಲಿ ಯಾರಾದರೂ ಶಿಕ್ಷಣವನ್ನು ಬಯಸುತ್ತಾರೆಯೇ?

ಇಂದು ನಾವು ಅತ್ಯುತ್ತಮ ಕ್ರೀಡಾಪಟುಗಳು, ತಂತ್ರಜ್ಞಾನಿಗಳು, ವಿಜ್ಞಾನಿಗಳು ಭಾರತದಲ್ಲಿ ಹುಟ್ಟಬೇಕು ಎಂದು ಬಯಸುತ್ತೇವೆ. ಅವರನ್ನು ನಾವು ಯುವಕರಲ್ಲಿ ಹುಡುಕುತ್ತೇವೆ. ಆದರೆ ಎಳವೆಯಲ್ಲಿ ಪೌಷ್ಟಿಕತೆಯಿಲ್ಲದೆ ಬೆಳೆದ ಮಕ್ಕಳು ಈ ದೇಶಕ್ಕೆ ಏನನ್ನು ನೀಡಲು ಸಾಧ್ಯ? ಒಂದೆಡೆ ಹಸಿವು, ಬಡತನಕ್ಕೆ ಜನಸಂಖ್ಯೆ ಹೆಚ್ಚಳವೇ ಕಾರಣವೆಂದು ಸರಕಾರ ಹೇಳುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಅಸಮರ್ಪಕವಾದ ಸಂಪನ್ಮೂಲಗಳ ಹಂಚಿಕೆಯೇ ಹಸಿವಿನ ಹೆಚ್ಚಳಕ್ಕೆ ಕಾರಣ ಎನ್ನುವುದನ್ನು ಮುಚ್ಚಿ ಹಾಕುತ್ತಿದೆ. ನೋಟು ನಿಷೇಧ, ಜಾನುವಾರು ಮಾರಾಟ ನಿಯಂತ್ರಣ ಮೊದಲಾದ ಆರ್ಥಿಕ ನೀತಿಯ ಬಳಿಕ ದೇಶದಲ್ಲಿ ಹಸಿವು ಹೆಚ್ಚುತ್ತಿದೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಒಬ್ಬ ಶಾಸಕನಿಗೆ ನೂರು ಕೋಟಿ ರೂ.ನಂತೆ ಹತ್ತು ಶಾಸಕರನ್ನು ಕ್ಷಣ ಮಾತ್ರದಲ್ಲಿ ಒಂದು ಸಾವಿರ ಕೋಟಿ ರೂ. ಕೊಟ್ಟು ಕೊಂಡುಕೊಳ್ಳುವಷ್ಟು ಹಣ ನಮ್ಮ ರಾಜಕಾರಣಿಗಳ ಬಳಿ ಇದೆ. ಇದೇ ಸಂದರ್ಭದಲ್ಲಿ ಎಟಿಎಂನ ಮುಂದೆ ನಿಂತ ಶ್ರೀಸಾಮಾನ್ಯ ನೋಟುಗಳಿಲ್ಲದೆ ನಿರಾಶನಾಗಿ ಮನೆಗೆ ಮರಳುತ್ತಾನೆ. ಇತ್ತೀಚಿನ ಆರ್ಥಿಕ ನೀತಿಯಿಂದಾಗಿ ಅಭಿವೃದ್ಧಿ ಕೆಲವೇ ಕೆಲವರನ್ನು ಹಿಂಬಾಲಿಸುತ್ತಿದೆ. ಇದ್ದವರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ, ಹಸಿವನ್ನು ಸರಕಾರ ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News