ತನ್ನದೇ ರಕ್ತದ ಗುಂಪು ತಿಳಿದುಕೊಳ್ಳಲು ಆರ್‌ಟಿಐ ಅರ್ಜಿ ಸಲ್ಲಿಸಿದ!

Update: 2018-05-23 05:22 GMT

 ಹೊಸದಿಲ್ಲಿ, ಮೇ 23: ಕೇಂದ್ರೀಯ ಮಾಹಿತಿ ಆಯೋಗ ಮಂಗಳವಾರ ವಿಚಿತ್ರ ಪ್ರಕರಣವೊಂದರ ವಿಚಾರಣೆ ಆರಂಭಿಸಿದೆ. ತನ್ನದೇ ರಕ್ತದ ಗುಂಪು ತಿಳಿದುಕೊಳ್ಳಲು ವ್ಯಕ್ತಿಯೊಬ್ಬ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅರ್ಜಿ ಸಲ್ಲಿಸಿದ್ದು, ಆಯೋಗವು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರನ ರಕ್ತದ ಗುಂಪಿನ ಬಗ್ಗೆ ತಪಾಸಣೆ ಮಾಡಿಸಿದಾಗ ಭಿನ್ನ ವರದಿಗಳು ಬಂದ ಹಿನ್ನೆಲೆಯಲ್ಲಿ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದಾನೆ.

ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಗೆ ಅರ್ಜಿ ಸಲ್ಲಿಸಲಾಗಿದೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಿದ ರಕ್ತ ಪರೀಕ್ಷೆಯ ವರದಿಗಳನ್ನು ಕೂಡಾ ಅರ್ಜಿಯ ಜತೆ ಲಗತ್ತಿಸಲಾಗಿದೆ. ರಾಹುಲ್ ಚೈತ್ರಾ ಎಂಬಾತನ ರಕ್ತ ಪರೀಕ್ಷೆ ನಡೆಸಿದ ವಿವಿಧ ಪ್ರಯೋಗಾಲಯ ವರದಿಗಳಲ್ಲಿ ರಕ್ತ ಗುಂಪಿನ ಬಗ್ಗೆ ಭಿನ್ನ ಫಲಿತಾಂಶ ಬಂದಿವೆ. ಕೆಲ ಪರೀಕ್ಷೆಗಳಲ್ಲಿ ರಕ್ತದ ಆರ್‌ಎಚ್‌ ಅಂಶ ಧನಾತ್ಮಕ ಎಂದು ಉಲ್ಲೇಖಿಸಿದ್ದರೆ ಮತ್ತೆ ಕೆಲವು ವರದಿಗಳಲ್ಲಿ ಋಣಾತ್ಮಕ ಎಂಬ ಉಲ್ಲೇಖವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಆರ್‌ಎಚ್ ಅಂಶವೆಂದರೆ ಕೆಂಪು ರಕ್ತಕಣದ ಮೇಲ್ಮೈನಲ್ಲಿ ಕಂಡುಬರುವ ಅಂತರ್ಗತ ಪ್ರೊಟೀನ್ ಆಗಿದೆ. ವ್ಯಕ್ತಿಯ ರಕ್ತದಲ್ಲಿ ಪ್ರೊಟೀನ್ ಅಂಶವಿದ್ದರೆ ಪಾಸಿಟಿವ್ ಎಂದೂ, ಇಲ್ಲದಿದ್ದರೆ ನೆಗೆಟಿವ್ ಎಂದೂ ಪರಿಗಣಿಸಲಾಗುತ್ತದೆ. ಬಹುತೇಕ ವ್ಯಕ್ತಿಗಳ ರಕ್ತಕಣಗಳು ಆರ್‌ಎಚ್ ಪಾಸಿಟಿವ್ ಆಗಿರುತ್ತವೆ.

ಇವರ ಅರ್ಜಿಯನ್ನು ಎಂಸಿಐ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಆಗ್ರಾದ ನಾಲ್ಕು ಪ್ರಯೋಗಾಲಯಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸಿರುವ ಚೈತ್ರಾರ ರಕ್ತ ಗುಂಪನ್ನು ಎರಡು ಕಡೆ ಬಿ ಪಾಸಿಟಿವ್ ಎಂದು ವರದಿ ಮಾಡಿದ್ದರೆ, ಮತ್ತೆರಡು ಕಡೆ ಬಿ ನೆಗೆಟಿವ್ ಎಂದು ಫಲಿತಾಂಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News