ರಾಜ್ಯದ ಆರ್ಥಿಕ ಪರಿಸ್ಥಿತಿ ಏರುಪೇರಾದರೂ ರೈತರ ನೋವಿಗೆ ಸ್ಪಂದಿಸಲಿದ್ದೇನೆ: ಕುಮಾರಸ್ವಾಮಿ

Update: 2018-05-23 05:49 GMT

ಮೈಸೂರು, ಮೇ 23: ಸಾಲಮನ್ನಾ ವಿಚಾರದಲ್ಲಿ ನಾನು ಯೂ ಟರ್ನ್ ಹೊಡೆದಿಲ್ಲ. ಕೆಲ ಮಾಧ್ಯಮಗಳ ವರದಿಯನ್ನು ನಾನು ಗಮನಿಸಿದ್ದೇನೆ. ನಾನು ಕೊಟ್ಟ ಭರವಸೆಯಿಂದ ಹಿಂದೆ ಸರಿಯೋದಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಚಾಮುಂಡೇಶ್ವರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಹಳದಿ ಕಣ್ಣಿಗೆ ಹಳದಿಯೇ ಕಾಣಿಸುತ್ತದೆ. ಬಿಜೆಪಿಯವರಿಗೆ ಜನರ ದಾರಿ ತಪ್ಪಿಸುವುದೇ ಕೆಲಸ ಎಂದರು.

ನಾನು ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇನೆ. ಆದರೆ ನಮ್ಮದು ಸ್ವತಂತ್ರ ಸರಕಾರವಲ್ಲ, ಸಮ್ಮಿಶ್ರ ಸರಕಾರ. ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಅವರ ಪ್ರಣಾಳಿಕೆ, ನಮ್ಮ ಪ್ರಣಾಳಿಕೆಯಲ್ಲಿರುವ ಭರವಸೆಗಳ ಈಡೇರಿಸಲಿದ್ದೇನೆ. ಯಾವ ಆರ್ಥಿಕ ತಜ್ಞರು ಏನೇ ಹೇಳಿದರೂ, ರಾಜ್ಯದ ಆರ್ಥಿಕ ಪರಿಸ್ಥಿತಿ ಏರುಪೇರಾದರೂ ರೈತರ ನೋವಿಗೆ ಸ್ಪಂದಿಸಲಿದ್ದೇನೆ. ರೈತರ ನೋವಿಗೆ ಸ್ಪಂದಿಸುವುದು ಸಮ್ಮಿಶ್ರ ಸರಕಾರದ ಕರ್ತವ್ಯ ಎಂದರು.

ಸರಕಾರದಲ್ಲಿ ಸಿದ್ದರಾಮಯ್ಯರ ಪಾತ್ರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಸರಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, 2 ದಿನಗಳಲ್ಲಿ ಅದೇನೆಂದು ಗೊತ್ತಾಗುತ್ತದೆ. ರಾಜ್ಯದಲ್ಲಿ ರೈತರಾಗಲೀ ಅಥವಾ ಯಾರೇ ಆಗಲಿ ಏನೇ ಸಂಕಷ್ಟದಲ್ಲಿದ್ದರೂ ನೇರವಾಗಿ ವಿಧಾನಸೌಧಕ್ಕೆ ಬಂದು ನನ್ನನ್ನು ಭೇಟಿಯಾಗಬಹುದು. ಬೆಳಗ್ಗೆ 6 ಗಂಟೆಯಿಂದಲೇ ನನ್ನ ಕಚೇರಿ ತೆರೆದಿರುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News