ನೀವು ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ

Update: 2018-05-23 13:11 GMT

ಬೆಂಗಳೂರು, ಮೇ 23: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಹುದ್ದೆಗೆ ತಾನು ಬೇಡಿಕೆ ಇಟ್ಟಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ನಗರದ ಹಿಲ್ಟನ್ ಹೊಟೇಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಮನಸ್ತಾಪವಿಲ್ಲ. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಇಲ್ಲಿ ನಮ್ಮ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ, ಸಚಿವ ಸ್ಥಾನ ಅಥವಾ ಡಿಸಿಎಂ ಹುದ್ದೆಗಾಗಿ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ಕೊಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಾನು ಯಾವುದೆ ಹುದ್ದೆಗಾಗಿ ಅರ್ಜಿ ಹಾಕಿಲ್ಲ, ಸದ್ಯಕ್ಕೆ ಯಾವುದೇ ಹುದ್ದೆಗಳು ಖಾಲಿಯಿಲ್ಲ ಎಂದು ಶಿವಕುಮಾರ್ ಹೇಳಿದರು.

ಹಣೆ ಬರಹದ ಮುಂದೆ ಯಾರೂ ಏನು ಮಾಡಿದರೂ ನಡೆಯುವುದಿಲ್ಲ. ನಾನು ಮುನಿಸಿಕೊಂಡಿದ್ದೇನೆ ಎಂಬುದು ಕೇವಲ ಊಹಾಪೋಹ. ಮನೆಗೆ ಹೋಗದೆ ಬಹಳ ದಿನಗಳಾಗಿತ್ತು. ಆದುದರಿಂದ, ನಿನ್ನೆ ರಾತ್ರಿ ಹೊಟೇಲ್‌ನಿಂದ ಮನೆಗೆ ಹೋಗಿದ್ದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಳೆ ಸಂಭ್ರಮಾಚರಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೇಲಿದ್ದ ಹಳೆಯ ಸಿಟ್ಟನ್ನೆಲ್ಲಾ ತಾನೀಗ ಮೂಟೆ ಕಟ್ಟಿಟ್ಟಿದ್ದೀನಿ. ಇಡೀ ದೇಶ ನೋಡೋ ಹಾಗೆ ನಮ್ಮ ಮುಖ್ಯಮಂತ್ರಿಗಳ(ಎಚ್.ಡಿ.ಕುಮಾರಸ್ವಾಮಿ) ಕೈ ಎತ್ತಿ ಹಿಡಿದಿದ್ದೀನಿ. ನನ್ನ ಕೈಯನ್ನೆ ಕೊಟ್ಟಿದ್ದೀನಿ, ಅವರೀಗ ಈ ಕೈ ಹಿಡಿದುಕೊಂಡು ಕಾಪಾಡಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News