ಮುಂಬೈ ಪೊಲೀಸರು ಹೃತಿಕ್ ರೋಷನ್ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಏಕೆ ?

Update: 2018-05-24 10:41 GMT

ಮುಂಬೈ, ಮೇ 24 : ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ನೀಡಿರುವ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಸವಾಲನ್ನು ಒಬ್ಬೊಬ್ಬರು ಸೆಲೆಬ್ರಿಟಿಗಳು ಒಂದೊಂದು ರೀತಿಯಲ್ಲಿ ಸ್ವೀಕರಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಪುಟ್ಟ ವ್ಯಾಯಾಮ ಮಾಡುವ ವೀಡಿಯೊ ಟ್ವೀಟ್ ಮಾಡಿದ ಸಚಿವ ರಾಜ್ಯವರ್ಧನ್ ನೀವು ಹೀಗೆ ಮಾಡಿ ಟ್ವೀಟ್ ಮಾಡಿ ಎಂದು ಹೃತಿಕ್ ರೋಷನ್, ವಿರಾಟ್ ಕೊಹ್ಲಿ ಹಾಗು ಸೈನಾ ನೆಹ್ವಾಲ್ ಗೆ ಅಹ್ವಾನ ನೀಡಿದ್ದರು.

ಅದನ್ನು ಸ್ವೀಕರಿಸಿದ ಕೊಹ್ಲಿ ಜಿಮ್ ನಲ್ಲಿ ಆಕರ್ಷಕ ವ್ಯಾಯಾಮ ಮಾಡಿ ಅದರ ವೀಡಿಯೊ ಟ್ವೀಟ್ ಮಾಡಿ ಪ್ರಧಾನಿ ಮೋದಿ, ಧೋನಿ ಹಾಗು ಪತ್ನಿ ಅನುಷ್ಕಾಗೆ ಅಹ್ವಾನ ನೀಡಿದ್ದರು. ಆದರೆ ರಾಜ್ಯವರ್ಧನ್ ರ ಆಹ್ವಾನ ಸ್ವೀಕರಿಸಿದ ಹೃತಿಕ್ ರೋಷನ್ ಮಾತ್ರ ಏನೋ ವಿಶೇಷ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

"ಸುಮ್ಮನೆ ಕೂತುಕೊಂಡು ಕಾರಲ್ಲಿ ಹೋಗುವ ಬದಲು ನಾನು ಪ್ರತಿದಿನ ಕಚೇರಿಗೆ ಹೀಗೆ ಹೋಗುತ್ತೇನೆ" ಎಂದು ಜನನಿಬಿಡ ರಸ್ತೆಯಲ್ಲಿ ಸೈಕಲ್ ನಲ್ಲಿ ತಾನು ಹೋಗುವ ವೀಡಿಯೊವನ್ನು ಹೃತಿಕ್ ಪೋಸ್ಟ್ ಮಾಡಿದ್ದಾರೆ. ಸಾಲದ್ದಕ್ಕೆ ಒಂದು ಸೈಕಲ್ ಹ್ಯಾಂಡಲ್ ಹಿಡಿದುಕೊಂಡಿರುವ ಹೃತಿಕ್ ಇನ್ನೊಂದು ಕೈಯಲ್ಲಿ ತಾನು ಸೈಕ್ಲಿಂಗ್ ಮಾಡುವ ವೀಡಿಯೊ ಚಿತ್ರೀಕರಣ ಬೇರೆ ಮಾಡಿದ್ದಾರೆ.

ಹೃತಿಕ್ ತೋರಿಸಿದ ದಾರಿಯಲ್ಲಿ ಪ್ರತಿದಿನ ಸೈಕಲ್ ನಲ್ಲಿ ಹೋಗುವುದು ಅಸಾಧ್ಯ . ಅಷ್ಟು ಜನನಿಬಿಡ ರಸ್ತೆಯದು. ಇನ್ನು ಸೈಕಲ್ ನಲ್ಲಿ ಹೋಗುವಾಗ ಸೆಲ್ಫಿ ವೀಡಿಯೊ ತೆಗೆಯುವುದರ ಮೂಲಕ ಹೃತಿಕ್ ಯುವ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಇದು ಕಾನೂನು ಬಾಹಿರ ಕೂಡ. 

ಇದನ್ನು ಹಲವರು ಟ್ವೀಟ್ ಮಾಡಿ ಹೃತಿಕ್ ರನ್ನು ಟೀಕಿಸಿದ್ದಾರೆ. ಜೊತೆಗೆ ಮುಂಬೈ ಪೊಲೀಸರಿಗೂ ಟ್ಯಾಗ್ ಮಾಡಿ ಈಗ ನೀವು ಏನು ಮಾಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ತಕ್ಷಣ ಸ್ಪಂದಿಸಿರುವ ಮುಂಬೈ ಪೊಲೀಸರು ಸಂಬಂಧಪಟ್ಟ ವಿಭಾಗದ ಟ್ರಾಫಿಕ್ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇವೆ ಎಂದು ಹೇಳಿದ್ದಾರೆ. 
ಒಟ್ಟಾರೆ ಏನೋ ಮಾಡಲು ಹೋಗಿ ಹೃತಿಕ್ ಇನ್ನೇನೋ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಅಸಂಖ್ಯ ಅಭಿಮಾನಿಗಳಿಗೆ ತಪ್ಪು ದಾರಿ ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News