ಪ್ರಧಾನಿಗೆ ದುಬಾರಿಯಾಯ್ತು ವಿರಾಟ್ ಸವಾಲು ಸ್ವೀಕರಿಸುವ ನಿರ್ಧಾರ

Update: 2018-05-24 11:00 GMT

ಹೊಸದಿಲ್ಲಿ, ಮೇ 24: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ‘ಫಿಟ್ನೆಸ್ ಚಾಲೆಂಜ್’ ಸ್ವೀಕರಿಸಿದ ಪ್ರಧಾನಿ ಮೋದಿಯವರ ನಿರ್ಧಾರ ಅವರಿಗೇ ದುಬಾರಿಯಾಗಿ ಪರಿಣಮಿಸಿದೆ. ವಿಪಕ್ಷಗಳು ಇದೇ ಚಾಲೆಂಜ್ ಮುಂದಿಟ್ಟುಕೊಂಡು ಮೋದಿ ವಿರುದ್ಧ ದಾಳಿ ನಡೆಸಲು ಆರಂಭಿಸಿದ್ದರು.

ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ನಂತರ ಇದೇ ಚಾಲೆಂಜ್ ಸ್ವೀಕರಿಸುವಂತೆ ಎಂ.ಎಸ್.ಧೋನಿ, ಅನುಷ್ಕಾ ಶರ್ಮಾ ಹಾಗು ಪ್ರಧಾನಿ ಮೋದಿಯವರನ್ನು ಟ್ಯಾಗ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ, “ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇನೆ ವಿರಾಟ್ “ ಎಂದಿದ್ದರು. ಮೋದಿ ಈ ಟ್ವೀಟ್ ಮಾಡುತ್ತಲೇ ವಿಪಕ್ಷ ನಾಯಕರು ಟ್ವೀಟ್ ಗಳ ಸುರಿಮಳೆಗೈದಿದ್ದಾರೆ. “ವಿರಾಟ್ ಕೊಹ್ಲಿಯವರ ಫಿಟ್ನೆಸ್ ಚಾಲೆಂಜ್ ಅನ್ನು ಒಪ್ಪಿರುವುದಕ್ಕೆ ನಮ್ಮದೇನೂ ವಿರೋಧವಿಲ್ಲವಾದರೂ, ಯುವಕರಿಗೆ ಉದ್ಯೋಗವೊದಗಿಸುವ, ರೈತರಿಗೆ ಪರಿಹಾರ ನೀಡುವ ಸವಾಲು ಸ್ವೀಕರಿಸಿ, ದಲಿತರು ಹಾಗು ಅಲ್ಪಸಂಖ್ಯಾತರ ವಿರುದ್ಧ ಹಿಂಸೆ ನಡೆಯುವುದಿಲ್ಲವೆಂಬ ಭರವಸೆ ನಿಮ್ಮಿಂದ ಬಯಸುತ್ತೇವೆ. ನನ್ನ ಚಾಲೆಂಜನ್ನು ಒಪ್ಪುತ್ತೀರಾ ನರೇಂದ್ರ ಮೋದಿ ಸರ್?” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದರು,

ಇದೀಗ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಂಜಯ್ ಝಾ ತಮ್ಮ ಡಿಗ್ರಿ ಸರ್ಟಿಫಿಕೆಟ್ ಗಳ ಫೋಟೊಗಳನ್ನು ಟ್ವೀಟ್ ಮಾಡಿ ಮೋದಿಗೆ ಸವಾಲು ಹಾಕಿದ್ದಾರೆ.

“ಪ್ರೀತಿಯ ಮಿ. ಮೋದಿ ನಾನು ನನ್ನ ಬಿಎ, ಎಂಎ ಹಾಗು ಎಂಬಿಎ ಡಿಗ್ರಿ ಸರ್ಟಿಫಿಕೆಟ್ ಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ. ನೀವು ಡಿಗ್ರಿಫಿಟ್ ಹೇಚಾಲೆಂಜ್ ಗೆ ತಯಾರಾಗಿದ್ದೀರಾ?, ತೀವ್ರ ಕುತೂಹಲದಿಂದ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ” ಎಂದು ಝಾ ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ತೂತುಕುಡಿ ಘಟನೆಯ ಬಗ್ಗೆ, ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ, ನಿರಂತರ ಪಾಕ್ ಸೇನೆಯ ದಾಳಿಯ ಬಗ್ಗೆ, ಪ್ರತಿಕಾಗೋಷ್ಟಿಯನ್ನು ಆಯೋಜಿಸುವ ಬಗ್ಗೆ ಹಾಗು ಮಾಧ್ಯಮದ ಪ್ರಶ್ನೆಗೆ ಅಲ್ಲೇ ಉತ್ತರಿಸುವ ಬಗ್ಗೆ ಹಲವರು ಟ್ವಿಟರ್ ನಲ್ಲಿ ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News