ಕರಾವಳಿಗೆ ಬೇಕಾಗಿದೆ ಮುತ್ಸದ್ದಿ, ಅನುಭವಿ ಉಸ್ತುವಾರಿ ಸಚಿವರು

Update: 2018-05-25 04:30 GMT

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೊನೆಗೂ ಅಸ್ತಿತ್ವಕ್ಕೆ ಬಂದಿದೆ. ವೈಯಕ್ತಿಕವಾಗಿ ತೀರಾ ಸರಳರಾಗಿರುವ, ಜನಸಾಮಾನ್ಯರ ಕೈಗೆಟಕುವ ವ್ಯಕ್ತಿತ್ವವನ್ನು ಹೊಂದಿರುವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ‘ಗ್ರಾಮ ವಾಸ್ತವ್ಯ’ವನ್ನು ಪರಿಚಯಿಸಿ, ಆ ಮೂಲಕ ಜನರು ಮತ್ತು ಆಳುವವರ ನಡುವಿನ ಅಂತರವನ್ನು ಇಲ್ಲವಾಗಿಸಲು ಯತ್ನಿಸಿದ್ದರು. ಈ ವಾಸ್ತವ್ಯ ಕೆಲವರಿಂದ ಟೀಕೆಗೆ ಒಳಗಾಯಿತಾದರೂ, ಕುಮಾರಸ್ವಾಮಿ ಆ ಮೂಲಕ ಹಳ್ಳಿ ಹಳ್ಳಿಗೆ ಪರಿಚಿತರಾದರು. 2006ರಲ್ಲಿ ಮುಖ್ಯಮಂತ್ರಿಯಂತಹ ಮಹತ್ವದ ಸ್ಥಾನವನ್ನು ವಹಿಸಿಕೊಳ್ಳುವಷ್ಟು ವರ್ಚಸ್ಸು ಅವರಿಗೆ ಇದ್ದಿರಲಿಲ್ಲ. ಮುಖ್ಯಮಂತ್ರಿಯಾಗಿ ಆ ಸ್ಥಾನವನ್ನು ಅವರು ನಿಭಾಯಿಸಬಲ್ಲರೇ? ಜೊತೆಗೆ ಸುತ್ತಿಕೊಂಡ ಬಿಜೆಪಿಯ ತಿಮಿಂಗಿಲಗಳು ಅವರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡೀತೇ? ಎಂಬ ಪ್ರಶ್ನೆ ಜನರನ್ನು ಕಾಡಿತ್ತು. ಇಂತಹ ಸಂದರ್ಭದಲ್ಲಿ ಇರುವ ಅವಧಿಯಲ್ಲಿ ಅವರು ಜನರನ್ನು ತಲುಪಲು ನಡೆಸಿದ ಪ್ರಯತ್ನ ಶ್ಲಾಘನೀಯವೇ ಆಗಿತ್ತು. ಈ ಬಾರಿ ಹಾಗಲ್ಲ. ಮುಖ್ಯವಾಗಿ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನ ಬೆಂಬಲದಿಂದ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವವೂ ಅವರಿಗಿದೆ. ಜೊತೆಗೆ ದೇವೇಗೌಡರ ಆಶೀರ್ವಾದ, ಮಾರ್ಗದರ್ಶನವೂ ಇದೆ. ಆದುದರಿಂದ ನಾಡು ಕುಮಾರಸ್ವಾಮಿಯಿಂದ ಹಿರಿದಾದುದನ್ನು ನಿರೀಕ್ಷಿಸುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳು ಹಾಗೂ ಕರಾವಳಿಯ ಕೋಮುಗಲಭೆಗಳು ಮುಂದಿನ ದಿನಗಳಲ್ಲಿ ಮೈತ್ರಿ ಸರಕಾರ ಎದುರಿಸಲಿರುವ ಎರಡು ಪ್ರಮುಖ ಸವಾಲುಗಳಾಗಿವೆ.

2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ಧೂಳೀಪಟವಾಗಿತ್ತು. ಬಿಜೆಪಿಯ ಆ ಹೀನಾಯ ಸೋಲಿಗೆ ಬಿಜೆಪಿ ನಾಯಕರ ಸ್ವಯಂಕೃತಾಪರಾಧವೇ ಮುಖ್ಯ ಕಾರಣವಾಗಿತ್ತು. ಆದರೆ ಈ ಬಾರಿ ಬಿಜೆಪಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮತ್ತೆ ಅರಳಿದೆ. ಒಂದು ಕ್ಷೇತ್ರ ಹೊರತು ಪಡಿಸಿದರೆ ಈ ಭಾಗದಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಬಿಜೆಪಿ ಕರಾವಳಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮತಯಾಚಿಸಿರುವುದಲ್ಲ, ಬದಲಿಗೆ ‘ಹಿಂದುತ್ವ’ವನ್ನು ಮುಂದಿಟ್ಟು ಮತದಾರರನ್ನು ಮರುಳು ಮಾಡಿದೆ. ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಕರಾವಳಿಯಲ್ಲಿ ಕೋಮುಗಲಭೆಗಳನ್ನು ಹಬ್ಬಿಸಲು ಸಂಘಪರಿವಾರ ಗರಿಷ್ಠ ಪ್ರಯತ್ನವನ್ನು ಮಾಡಿತು ಮತ್ತು ಚುನಾವಣೆಯಲ್ಲಿ ಅದರ ಲಾಭಗಳನ್ನು ಕೊಯ್ದುಕೊಂಡಿತು. ಕರಾವಳಿಯ ಗಲಭೆಗಳನ್ನು ಹಿನ್ನೆಲೆಯಾಗಿಟ್ಟು ಅದು ರಾಜ್ಯ ಮಟ್ಟದಲ್ಲೂ ಅಪಪ್ರಚಾರಗಳನ್ನು ಮಾಡಿತು. ಗಲಭೆಗಳಿಗೆ ಬಲಿಯಾದ ಹಿಂದೂ ಹೆಸರುಗಳನ್ನು ಬಳಸಿ ಬಿಜೆಪಿ ಚುನಾವಣೆಯಲ್ಲಿ ಮತ ಯಾಚಿಸಿತು. ಕರಾವಳಿಯ ಹೊರಗಡೆಯೂ ಗಲಭೆಯನ್ನು ವಿಸ್ತರಿಸಲು ನೋಡಿತು. ಈ ಸಂದರ್ಭದಲ್ಲಿ ಸರಕಾರ ಅದನ್ನು ಮಟ್ಟ ಹಾಕುವಲ್ಲಿ ಸಂಪೂರ್ಣ ವಿಫಲವಾಯಿತು. ಅವೆಲ್ಲದರ ಪರಿಣಾಮ ಚುನಾವಣಾ ಫಲಿತಾಂಶದ ಮೇಲೆ ಬಿದ್ದಿದೆ. ಇದೀಗ ರಾಜ್ಯದಲ್ಲಿ ಸರಕಾರ ರಚಿಸಲು ಪ್ರಯತ್ನ ಪಟ್ಟು ವಿಫಲಗೊಂಡ ಬಿಜೆಪಿ ಹತಾಶೆಯಲ್ಲಿದೆ. ಮುಂದಿನ ದಿನಗಳಲ್ಲಿ ಹಣದಿಂದ ಶಾಸಕರನ್ನು ಕೊಂಡು ಮೈತ್ರಿ ಸರಕಾರವನ್ನು ಉರುಳಿಸಲು ಅದು ವಿಫಲವಾದರೆ, ರಾಜ್ಯದಲ್ಲಿ ಅರಾಜಕತೆಯನ್ನು ಎಬ್ಬಿಸಿ ಸರಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತದೆ. ಅಂತಹ ಅರಾಜಕತೆಗಾಗಿ ಸಂಘಪರಿವಾರ ಕರಾವಳಿಯನ್ನೇ ಕೇಂದ್ರವಾಗಿಟ್ಟುಕೊಳ್ಳುತ್ತದೆ. ಈಗಾಗಲೇ ಕರಾವಳಿಯಲ್ಲಿ ಸಂಘಪರಿವಾರ ಮತ್ತೆ ತಲೆ ಎತ್ತಿ ನಿಂತಿರುವುದರಿಂದ ಆ ಕಾರ್ಯದಲ್ಲಿ ಸುಲಭವಾಗಿ ಯಶ ಕಾಣಬಹುದು. ಈ ಹಿಂದೆ ಅಧಿಕಾರವಿಲ್ಲದೆಯೇ ದುಷ್ಕೃತ್ಯಗಳಲ್ಲಿ ಯಶಸ್ವಿಯಾಗಿರುವ ಸಂಘಪರಿವಾರ ಈ ಬಾರಿ ಬಹುಸಂಖ್ಯೆಯ ಶಾಸಕರ ಧೈರ್ಯದಲ್ಲಿ ಕರಾವಳಿಗೆ ಬೆಂಕಿ ಹಚ್ಚುವ ಎಲ್ಲ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಯಾವುದೇ ಕೋಮುವಾದಿ ಸಂಘಟನೆಗಳು ಬಾಲ ಬಿಚ್ಚದಂತೆ ನೋಡಿಕೊಳ್ಳುವುದು ಮೈತ್ರಿ ಸರಕಾರದ ಮೊತ್ತ ಮೊದಲ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಮೈತ್ರಿ ಸರಕಾರದಿಂದ ಒಬ್ಬ ಅನುಭವಿ, ಮುತ್ಸದ್ದಿ ನಾಯಕನೊಬ್ಬನನ್ನು ಉಸ್ತುವಾರಿ ಸಚಿವನಾಗಿ ಆಯ್ಕೆ ಮಾಡುವುದು ಮೈತ್ರಿ ಸರಕಾರದ ಕರ್ತವ್ಯವಾಗಿದೆ.

ಈ ಬಾರಿ ಮಂಗಳೂರು ಕ್ಷೇತ್ರ ಹೊರತು ಪಡಿಸಿದರೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್, ಜೆಡಿಎಸ್‌ನ ಶಾಸಕನಿಲ್ಲ. ಈ ಕಾರಣದಿಂದ ಕಾಟಾಚಾರಕ್ಕಾಗಿ ಅಥವಾ ರಾಜಕೀಯ ಋಣ ಭಾರ ತೀರಿಸುವುದಕ್ಕಾಗಿ ದುರ್ಬಲ ಅಭ್ಯರ್ಥಿಗಳನ್ನು ಕರಾವಳಿ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಿದರೆ ಅದು ಮೈತ್ರಿ ಸರಕಾರಕ್ಕೆ ತಿರುಗು ಬಾಣವಾದೀತು. ಯಾರೋ ಅನನುಭವಿಗಳ ಕೈಗೆ ಕರಾವಳಿಯನ್ನು ಕೊಟ್ಟರೆ ಅದರ ಸಂಪೂರ್ಣ ಲಾಭವನ್ನು ಸಂಘಪರಿವಾರದ ನಾಯಕರು ತಮ್ಮದಾಗಿಸಿಕೊಳ್ಳುತ್ತಾರೆ. ಈಗಾಗಲೇ ಕರಾವಳಿಯ ಆಗುಹೋಗುಗಳನ್ನು ಕಂಡುಂಡ, ಸಂಘಪರಿವಾರದ ಸಂಚುಗಳನ್ನು ಮಟ್ಟ ಹಾಕಬಲ್ಲ, ಇಲ್ಲಿಯ ಅಭಿವೃದ್ಧಿಗೆ ಪೂರಕವಾಗಬಲ್ಲ ಅನುಭವಿ ನಾಯಕನನ್ನು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಗುರುತಿಸಿ ಅವರ ಕೈಗೆ ಕರಾವಳಿಯ ಚುಕ್ಕಾಣಿಯನ್ನು ನೀಡಬೇಕಾಗಿದೆ. ಅಂತಹ ಅನುಭವಿ, ಮುತ್ಸದ್ದಿ ನಾಯಕರು ಜೆಡಿಎಸ್‌ನಲ್ಲೂ, ಕಾಂಗ್ರೆಸ್‌ನಲ್ಲೂ ಈಗಾಗಲೇ ಇದ್ದಾರೆ. ಅವರನ್ನು ಗುರುತಿಸುವ ಕೆಲಸ ನಡೆಯಬೇಕಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಐದು ವರ್ಷ ನೆಮ್ಮದಿಯಿಂದ ಆಡಳಿತ ನಡೆಸಬೇಕಾದರೆ ಇದು ಅತ್ಯಗತ್ಯ.

ಅವಿಭಜಿತ ದಕ್ಷಿಣ ಕನ್ನಡ ಅದರಲ್ಲೂ ಮಂಗಳೂರು ರಾಜ್ಯದ ಅಭಿವೃದ್ಧಿಯ ದಿಕ್ಸೂಚಿಯಾಗಿದೆ. ಕರ್ನಾಟಕದಲ್ಲಿ ಬೆಂಗಳೂರನ್ನು ಹೊರತು ಪಡಿಸಿದರೆ, ದೇಶ ವಿದೇಶಗಳ ಕಣ್ಣು ಮಂಗಳೂರಿನ ಮೇಲಿದೆ. ಇಲ್ಲಿ ಈಗಾಗಲೇ ಬೇರೆ ಬೇರೆ ಬೃಹತ್ ಉದ್ಯಮಿಗಳು ಹಲವು ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿದ್ದಾರೆ. ಯೋಜನೆಗಳೆಲ್ಲವೂ ಜಾರಿಗೊಳ್ಳುವ ಹಂತದಲ್ಲಿದೆ. ಕಾಮಗಾರಿಗಳು ಬಿರುಸಿನಲ್ಲಿ ನಡೆಯುತ್ತಿವೆ. ಇನ್ನೊಂದು ಹತ್ತು ವರ್ಷಗಳಲ್ಲಿ ಮಂಗಳೂರು ಬೆಂಗಳೂರಿಗೆ ಸರಿಸಾಟಿಯಾಗುವುದರಲ್ಲಿದೆ. ಇವೆಲ್ಲವನ್ನು ಮಣ್ಣು ಪಾಲು ಮಾಡಲು ದುಷ್ಕರ್ಮಿಗಳಿಗೆ ಕೆಲ ಕ್ಷಣಗಳು ಸಾಕು. ಹಾಗೆಯೇ ಅಭಿವೃದ್ಧಿ ಯೋಜನೆಗಳು ತಮ್ಮ ಗುರಿಯನ್ನು ತಲುಪುವುದಕ್ಕೆ ಯೋಗ್ಯ, ಅನುಭವಿ ಚಿವರ ಮಾರ್ಗದರ್ಶನ ಅತ್ಯಗತ್ಯ.ಎತ್ತಿನಹೊಳೆ ಯೋಜನೆ ವಿವಾದ ಕರಾವಳಿ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಯೋಜನೆ ಕರಾವಳಿ ಮತ್ತು ಕೋಲಾರ ಭಾಗಗಳ ನಡುವಿನ ಜನರ ನಡುವೆ ಶೀತಲ ಸಮರವನ್ನು ಹುಟ್ಟು ಹಾಕಿದೆ. ಕರಾವಳಿಯ ಜನರ ಮನವೊಲಿಸಲು, ಯೋಜನೆಯ ಸಾಧಕ ಬಾಧಕಗಳನ್ನು ಸ್ಪಷ್ಟಪಡಿಸಲು ಸಚಿವರಾಗುವವರಿಗೆ ಸಾಕಷ್ಟು ದೂರದೃಷ್ಟಿಯ ಅಗತ್ಯವಿದೆ. ಅಭಿವೃದ್ಧಿ ಮತ್ತು ನೆಮ್ಮದಿ ಇವುಗಳು ಕರಾವಳಿಯ ಜನರ ಪ್ರಮುಖ ಅಗತ್ಯವಾಗಿದೆ. ಕರಾವಳಿಯಲ್ಲಿ ನೆಮ್ಮದಿ ಉಳಿದರೆ ಮಾತ್ರ ಅಭಿವೃದ್ಧಿ ಮುಂದೆ ಸಾಗಲು ಸಾಧ್ಯ. ಕರಾವಳಿಯ ಮನಸ್ಸನ್ನು ಅರ್ಥಮಾಡಿಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಈ ನಿಟ್ಟಿನಲ್ಲೇ ಹೆಜ್ಜೆ ಮುಂದಿಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News