ವಿಧಾನಸಭಾಧ್ಯಕ್ಷರಾಗಿ ರಮೇಶ್‌ಕುಮಾರ್ ಅವಿರೋಧ ಆಯ್ಕೆ

Update: 2018-05-25 15:13 GMT

ಬೆಂಗಳೂರು, ಮೇ 25: ವಿಧಾನಸಭಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಸಭಾಧ್ಯಕ್ಷರ ಚುನಾವಣೆಯ ಪ್ರಕ್ರಿಯೆ ಆರಂಭಿಸಿದರು. ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್‌ಕುಮಾರ್ ಪರ ಸೂಚಕರಾಗಿದ್ದ ವಿ.ಸುನೀಲ್ ಕುಮಾರ್, ಸೂಚನೆಯನ್ನು ಹಿಂಪಡೆಯುತ್ತಿರುವುದಾಗಿ ಪ್ರಕಟಿಸಿದರು.

ಆನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಕೆ.ಆರ್. ರಮೇಶ್‌ಕುಮಾರ್‌ರನ್ನು ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಇದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅನುಮೋದಿಸಿದರು.

ಚುನಾವಣೆಯ ಪ್ರಸ್ತಾವನೆಯನ್ನು ಹಂಗಾಮಿ ಸ್ಪೀಕರ್ ಮತಕ್ಕೆ ಹಾಕಲು ಮುಂದಾದಾಗ ಬಿಜೆಪಿಯ ಹಿರಿಯ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಪ್ರಸ್ತಾವನೆಯನ್ನು ಮತಕ್ಕೆ ಹಾಕುವ ಬದಲು ಸರ್ವಾನುಮತದ ಆಯ್ಕೆಯನ್ನು ಘೋಷಿಸುವಂತೆ ಮನವಿ ಮಾಡಿದರು. ಇದಕ್ಕೆ ಇಡೀ ಸದನ ಬೆಂಬಲ ವ್ಯಕ್ತಪಡಿಸಿತು.

ವಿಧಾನಸಭಾಧ್ಯಕ್ಷರ ಸ್ಥಾನದಲ್ಲಿ ಹಲವಾರು ಉತ್ತಮರನ್ನು ನೋಡಿದ್ದೇನೆ. ದೇಶಕ್ಕೆ ಸ್ವಾತಂತ್ರ ಬರುವ ಮುನ್ನವೇ ಮೈಸೂರು ರಾಜರ ಆಳ್ವಿಕೆಯನ್ನು ಪ್ರಜಾಪ್ರತಿನಿಧಿ ಸಭೆಯನ್ನು ರಚನೆ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಮಹತ್ವ ನೀಡಲಾಗಿತ್ತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಈ ಸದನದಲ್ಲಿ ವೈಕುಂಠ ಬಾಳಿಗಾ ಅಂತಹವರನ್ನು ಕಂಡಿದ್ದೇವೆ. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ನಾಗರತ್ನಮ್ಮ ಎಂಬವರು ಸ್ಪೀಕರ್ ಆಗಿ ಈ ಸದನವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅದೇ ರೀತಿ, ಎಸ್.ಎಂ.ಕೃಷ್ಣ, ಡಿ.ಬಿ.ಚಂದ್ರೇಗೌಡರನ್ನು ಕಂಡಿದ್ದೇವೆ. 1994ರಲ್ಲಿ ನಿಮ್ಮನ್ನು ಸ್ಪೀಕರ್ ಮಾಡುವಾಗ ನಮ್ಮ ತಂದೆ ಎಚ್.ಡಿ.ದೇವೇಗೌಡ ಸಿಎಂ ಆಗಿದ್ದರು. ಈಗ ಎರಡನೆ ಬಾರಿ ನಿಮ್ಮನ್ನು ಸ್ಪೀಕರ್ ಮಾಡುವಾಗ ಅವರ ಮಗನಾದ ನಾನು ಸಿಎಂ ಹುದ್ದೆಯಲ್ಲಿದ್ದೇನೆ. ಇದು ನನ್ನ ಸುದೈವ ಎಂದು ಕುಮಾರಸ್ವಾಮಿ ತಿಳಿಸಿದರು.

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 1994ರಿಂದ ಐದು ವರ್ಷಗಳ ಕಾಲ ನಿಮ್ಮ ಕೆಲಸವನ್ನು ನೋಡಿದ್ದೇನೆ. ಸ್ಪೀಕರ್ ಸ್ಥಾನಕ್ಕೆ ಹೆಚ್ಚಿನ ಗೌರವ ಸಿಗಬೇಕು ಎಂಬ ಉದ್ದೇಶದಿಂದ ಇಂದು ನಡೆದ ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿದೆವು ಎಂದರು.

ಸ್ಪೀಕರ್, ಸಚಿವರಾಗಿ ಅಪಾರವಾದ ಪಾಂಡಿತ್ಯವನ್ನು ಹೊಂದಿರುವ ನೀವು, ಆ ಸ್ಥಾನಕ್ಕೆ ನ್ಯಾಯ ಒದಗಿಸುತ್ತೀರಾ ಎಂಬ ನಂಬಿಕೆಯಿದೆ. ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ. ಪ್ರತಿಪಕ್ಷದ ಸದಸ್ಯರಿಗೂ ಆಡಳಿತ ಪಕ್ಷದ ಸದಸ್ಯರಿಗೆ ನೀಡಿದಂತೆ ಹೆಚ್ಚಿನ ಅವಕಾಶ ನೀಡಿ. ಅನೇಕ ಹೊಸ ಶಾಸಕರು ಎರಡು ಕಡೆ ಆಯ್ಕೆಯಾಗಿದ್ದಾರೆ. ಅವರಿಗೆ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಿ ಎಂದು ಅವರು ಮನವಿ ಮಾಡಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಸ್ಪೀಕರ್ ಸ್ಥಾನವು ರಾಜಕೀಯೇತರವಾದದ್ದು. ಆ ಸ್ಥಾನಕ್ಕೆ ಸರ್ವಾನುಮತದ ವ್ಯಕ್ತಿ ಆಯ್ಕೆಯಾಗುವಂತೆ ಸಹಕಾರ ನೀಡಿ ಎಂದು ನಿನ್ನೆ ಪ್ರತಿಪಕ್ಷದವರನ್ನು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದೆ. ಕಾಕತಾಳೀಯವೆಂಬಂತೆ ಇಂದು ಅದೇ ರೀತಿ ಆಗಿದೆ ಎಂದರು.

ನಮ್ಮ ರಾಜ್ಯದ ವಿಧಾನಸಭೆಯು ದೇಶದಲ್ಲೆ ಮಾದರಿಯಾಗಿದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮಂತಹವರು ಆ ಪೀಠದಲ್ಲಿರಬೇಕಾದ ಅಗತ್ಯವಿದೆ. ನಾವೇ ಮಾಡಿಕೊಂಡಿರುವ ನಿಯಮಗಳನ್ನು ಮೀರಿ ನಾವು ನಡೆಯುವುದಿಲ್ಲ. ಆದರೂ, ಸದನವನ್ನು ತಮ್ಮ ವಿವೇಚನೆಯಂತೆ ಯಶಸ್ವಿಯಾಗಿ ಮುನ್ನಡೆಸಿ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪ್ರಜಾತಂತ್ರ, ಸಂದೀಯ ವ್ಯವಸ್ಥೆಯಲ್ಲಿ ಬಹಳ ಮಹತ್ವದ ಜವಾಬ್ದಾರಿಯನ್ನು ತಾವು ಪಡೆದಿದ್ದೀರಾ. ಈ ಸದನದಲ್ಲಿ ಗಂಭೀರವಾದ ಚರ್ಚೆಗಳು ನಡೆಯಬೇಕು. ಬಹಳ ಚಿಕ್ಕ ವಯಸ್ಸಿನಲ್ಲೆ ಶಾಸಕರಾದ ತಮಗೆ 40 ವರ್ಷಗಳ ಸುದೀರ್ಘ ಅನುಭವವಿದೆ. ಶಾಸಕ, ಸಚಿವ, ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದೀರಾ ಎಂದರು.

ವೈಕುಂಠ ಬಾಳಿಗ ಯಾವ ರೀತಿ ಸದನ ನಡೆಸುತ್ತಿದ್ದರು ಎಂಬುದನ್ನು ನಾನು ನೋಡಿಲ್ಲ. ಆದರೆ, ಅವರು ರಾಜ್ಯದ ಅತ್ಯುತ್ತಮ ಸ್ಪೀಕರ್ ಆಗಿದ್ದರು ಎಂಬುದನ್ನು ಕೇಳಿದ್ದೇನೆ. ನಿಮಗೆ ಒಬ್ಬ ವಕೀಲನಿಗಿಂತ ಹೆಚ್ಚಿನ ಕಾನೂನು ಅರಿವು, ಸಂಸದೀಯ ಜ್ಞಾನವಿದೆ. ವಿಧೇಯಕಗಳು ಬಂದಾಗ ನಿಮ್ಮ ಪಾತ್ರ ಮುಖ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಇತ್ತೀಚೆಗೆ ಎರಡು ಸದನಗಳಲ್ಲಿ ಚರ್ಚೆಯ ಗುಣಮಟ್ಟ ಕುಸಿಯುತ್ತಿದೆ. ಹಳಬರು, ಹೊಸಬರು ಆಯ್ಕೆಯಾಗಿದ್ದಾರೆ. ನಿಮ್ಮ ಅನುಭವ ಅವರಿಗೆ ಮಾರ್ಗದರ್ಶಕವಾಗಲಿ. ಸಮ್ಮಿಶ್ರ ಸರಕಾರದಲ್ಲಿ ಸದನವನ್ನು ನಿಭಾಯಿಸುವುದು ಕಷ್ಟ. ಆದರೆ, ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಪೀಕರ್ ಚುನಾವಣೆಯಿಂದ ಹಿಂದಕ್ಕೆ ಸರಿದ ಬಿಜೆಪಿ ಶಾಸಕ ಸುರೇಶ್‌ ಕುಮಾರ್ ಮಾತನಾಡಿ, ಕಳೆದ 48 ಗಂಟೆಗಳಿಂದ ವಿಚಿತ್ರ ಮನಸ್ಥಿತಿಯಲ್ಲಿದ್ದ ನನಗೆ ಈಗ ನಿರಾಳವಾಗಿದೆ. ಸರ್ವಾನುಮತದಿಂದ ನಿಮ್ಮ ಆಯ್ಕೆಯಾಗಿದ್ದು, ಆ ಸ್ಥಾನಕ್ಕೆ ನೀವು ಅರ್ಹರು. ನೀವು ಒಬ್ಬ ಅತ್ಯುತ್ತಮ ಮಾರ್ಗದರ್ಶಕರಾಗಿದ್ದು, ಈ ಸದನದಲ್ಲಿ ಹಿಂದಿನ ಸಾಲಿನಲ್ಲಿ ಕೂರುವ ಸದಸ್ಯರಿಗೂ ಚರ್ಚೆಗಳ ಸಂದರ್ಭದಲ್ಲಿ ಹೆಚ್ಚಿನ ಅವಕಾಶಗಳನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಲ್ಲದೆ, ಬಿಜೆಪಿಯ ಉಪ ನಾಯಕ ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಪಿ.ರಾಜೀವ್, ಮಾಜಿ ಸಚಿವ ಕೃಷ್ಣಭೈರೇಗೌಡ ನೂತನ ಸ್ಪೀಕರ್‌ಗೆ ಅಭಿನಂದನೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News