ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಲತಾಯಿ ಧೋರಣೆ ಮುಂದುವರೆದಿದೆ: ಉಷಾ ಪಿ. ರೈ ವಿಷಾದ

Update: 2018-05-26 12:47 GMT

ಬೆಂಗಳೂರು, ಮೇ 26: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಲತಾಯಿ ಧೋರಣೆ ಮುಂದುವರೆದಿದೆ. ಇಂದಿಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆಯರನ್ನು ಕೇವಲ ನಿರೂಪಣೆ, ವಂದನಾರ್ಪಣೆ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹಿರಿಯ ಲೇಖಕಿ ಉಷಾ ಪಿ.ರೈ ವಿಷಾದಿಸಿದರು.

ಶನಿವಾರ ಕರ್ನಾಟಕ ಲೇಖಕಿಯರ ಸಂಘ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘2018ನೆ ಸಾಲಿನ ಅನುಪಮಾ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಪುರುಷ ಪ್ರಧಾನ ವ್ಯವಸ್ಥೆಯಿಂದ ಹೊರ ಬಂದಿಲ್ಲ. ಸಾಹಿತ್ಯ ಸಮ್ಮೇಳನಗಳ ಆಹ್ವಾನ ಪತ್ರಿಕೆಗಳನ್ನು ಗಮನಿಸಿದರೆ ಮಹಿಳೆಯರಿಗೆ ಯಾವ ಸ್ಥಾನ ನೀಡಿದ್ದಾರೆ ಎಂಬುದು ತಿಳಿಯಲಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂದು ನೂರು ವರ್ಷ ಕಳೆದರೂ ಇಂದಿಗೂ ಮಹಿಳೆಯರು ಅಧ್ಯಕ್ಷರಾಗಿಲ್ಲ. ಈ ಬಗ್ಗೆ ಒಬ್ಬ ಪುರುಷ ಹಿರಿಯ ಸಾಹಿತಿಯೊಬ್ಬರ ಬಳಿ ತನ್ನ ಅಳಲನ್ನು ತೋಡಿಕೊಂಡರೆ, ‘ಮಹಿಳೆಯರು ಅಧ್ಯಕ್ಷರಾಗಲಿ. ಯಾರು ಬೇಡ ಅಂದವರು’ ಎಂಬ ರೀತಿಯಲ್ಲಿ ಉದ್ಧಟತನದಿಂದ ಮಾತನಾಡುತ್ತಾರೆ. ಅಂದರೆ, ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಅಗತ್ಯವಿದೆಯೇನೊ ಎಂದೆನಿಸುತ್ತದೆ ಎಂದು ಅವರು ಅಭಿಪ್ರಾಯಿಸಿದರು.

ಲೇಖಕಿಯರ ಸಂಘ ಸಾಹಿತ್ಯಕ್ಕೆ ಮೀಸಲಾಗಿರಲಿ: ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಲೇಖಕಿಯರ ಸಂಘ ಸಾಹಿತ್ಯ ಚಟುವಟಿಕೆಗಳಿಗಿಂತ ಹೆಚ್ಚಾಗಿ ಹೋರಾಟಗಳಲ್ಲಿ ನಿರತವಾಗಿರುವುದನ್ನು ಗಮನಿಸುತ್ತಿದ್ದೇನೆ. ಇವತ್ತಿನ ದಿನಗಳಲ್ಲಿ ಮಹಿಳೆಯರ ಅನುಭವಿಸುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಹೋರಾಟ ಮಾಡಲೇಬೇಕು. ಆದರೆ, ಹೋರಾಟ ಮಾಡುವುದಕ್ಕೆ ಬೇರೆ, ಬೇರೆ ಸಂಘ, ಸಂಸ್ಥೆಗಳು ಇವೆ. ಆ ಸಂಘಟನೆಗಳಿಗೆ ನೈತಿಕ ಬೆಂಬಲ, ಬಾಹ್ಯ ಬೆಂಬಲ ನೀಡುತ್ತಲೆ ಕರ್ನಾಟಕ ಲೇಖಕಿಯರ ಸಂಘ ಸಾಹಿತ್ಯ ಚುಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅವರು ಆಶಿಸಿದರು.

ಕರ್ನಾಟಕ ಲೇಖಕಿಯರ ಸಂಘದೊಂದಿಗಿನ ನನ್ನ ನಂಟು ಬಿಡಿಸಲಾರದ್ದಾಗಿದೆ. ಹಿರಿಯ ಲೇಖಕಿಯರಾದ ಎಂ.ಕೆ.ಇಂದಿರಾ, ಟಿ.ಸುನಂದಮ್ಮ, ಎ.ಪಂಕಜ ಸೇರಿದಂತೆ ಹಲವರು ನನ್ನ ಸಾಹಿತ್ಯ ಕೃಷಿಗೆ ಸ್ಫೂರ್ತಿಯಾಗಿದ್ದಾರೆ. ಹಾಗೂ ಹಿರಿಯ ಸಾಹಿತಿ ಅನುಪಮಾ ನಿರಂಜನ ಒಡನಾಟ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಜೀವನದಲ್ಲಿ ಎದುರಾದ ಏಳುಬೀಳುಗಳನ್ನು ಸಮಚಿತ್ತದಿಂದ ಎದುರಿಸಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.

ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ, ರಾಜ್ಯದಲ್ಲಿರುವ ಲೇಖಕಿಯರ ಪ್ರಮಾಣದಷ್ಟು ದೇಶದ ಇತರೆ ರಾಜ್ಯಗಳಲ್ಲಿ ಕಂಡುಬರುವುದಿಲ್ಲ. ದೇಶದ ಇತರೆ ರಾಜ್ಯಗಳ ಸಾಹಿತ್ಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಿ ಈ ಮಾತನ್ನು ಹೇಳುತ್ತಿದ್ದೇನೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಹಿಳೆಯರು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಲೇಖಕಿಯರ ಸಂಘವು ಮತ್ತಷ್ಟು ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ಹಾಗೂ ರಾಜ್ಯವು ಒಳಗೊಂಡಂತೆ ದೇಶದ ಇತರೆ ರಾಜ್ಯಗಳಿಗೂ ವಿಸ್ತರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಯೋಜನೆಗಳು ರೂಪುಗೊಳ್ಳಲಿ ಎಂದು ಅವರು ಆಶಿಸಿದರು.

ಈ ವೇಳೆ ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲು ಕರ್ನಾಟಕ ಲೇಖಕಿಯರ ಸಂಘಕ್ಕೆ ಒಂದು ಲಕ್ಷ ರೂ. ಚೆಕ್‌ನ್ನು ಹಂಪಾ ನಾಗರಾಜಯ್ಯ ನೀಡಿದರು. ಕಾರ್ಯಕ್ರಮದಲ್ಲಿ ವಿಮರ್ಶಕ ಎಸ್.ಆರ್.ವಿಜಯಶಂಕರ್ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News