ಜಿಎಸ್ ಟಿ ವ್ಯಾಪ್ತಿಗೆ ಬಂದರೆ ಇಂಧನ ಬೆಲೆ ಕಡಿಮೆ: ಕೇಂದ್ರ ಸಚಿವರ ವಾದ ಅಲ್ಲಗಳೆದ ಸುಶೀಲ್‍ಕುಮಾರ್ ಮೋದಿ

Update: 2018-05-27 07:37 GMT

ಪಾಟ್ನಾ, ಮೇ 27: ಗಗನಕ್ಕೇರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಜಿಎಸ್‍ಟಿ ಪರಿಹಾರ ಎಂಬ ಕೇಂದ್ರ ಸಚಿವರ ವಾದವನ್ನು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್‍ಕುಮಾರ್ ಮೋದಿ ಬಲವಾಗಿ ಅಲ್ಲಗಳೆದಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತಂದರೆ ಬೆಲೆ ಕಡಿಮೆಯಾಗುತ್ತದೆ ಎನ್ನುವುದು ತಪ್ಪುಕಲ್ಪನೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದು, ಇದನ್ನು ನಿರ್ವಹಿಸುವಲ್ಲಿನ ಕೇಂದ್ರದ ವೈಫಲ್ಯ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ. ಬೆಲೆ ಏರಿಕೆಗೆ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾರಣವಾದರೂ, ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರಿ ತೆರಿಗೆ ವಿಧಿಸುತ್ತಿರುವುದೂ ಗ್ರಾಹಕರ ಜೇಬು ಸುಡಲು ಕಾರಣವಾಗಿದೆ. ಚಿಲ್ಲರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸುಮಾರು ಶೇಕಡ 50ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ರಾಜ್ಯಗಳು ಒಪ್ಪಿದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ಸಿದ್ಧ ಎಂದು ಘೋಷಿಸುವ ಮೂಲಕ ಕೇಂದ್ರ ಸರ್ಕಾರ, ಸಾರ್ವಜನಿಕರ ಆಕ್ರೋಶದಿಂದ ಪಾರಾಗುವ ಪ್ರಯತ್ನ ಮಾಡಿತ್ತು. ಜಿಎಸ್‍ಟಿ ವ್ಯಾಪ್ತಿಗೆ ಬಂದರೂ ಬೆಲೆ ಇಳಿಕೆ ಅಸಾಧ್ಯ. ಹೆಚ್ಚೆಂದರೆ ಇದರ ಪರಿಣಾಮ ತೀರಾ ಅತ್ಯಲ್ಪವಾಗಬಹುದು ಎನ್ನುವುದು ಜಿಎಸ್‍ಟಿ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸುಶೀಲ್ ಮೋದಿಯವರ ಅಭಿಪ್ರಾಯ. ಆದರೆ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News