ಮತದಾನ ಬಿರುಸು: ರಾಜರಾಜೇಶ್ವರಿ ನಗರ ಕ್ಷೇತ್ರದತ್ತ ಎಲ್ಲರ ಚಿತ್ತ

Update: 2018-05-28 05:14 GMT

ಬೆಂಗಳೂರು, ಮೇ 28: ರಾಜ್ಯದಲ್ಲಿ ಬದಲಾಗಿರುವ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಪಡೆದಿರುವ ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗಿದೆ.

ನಕಲಿ ಮತದಾರರ ಚೀಟಿ ಹಗರಣದ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮತಗಳ ಎಣಿಕೆಕಾರ್ಯ ಮೇ 31ರಂದು ನಡೆಯಲಿದೆ. ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಶಪಡಿಸಿಕೊಂಡ ಮತದಾರರ ಗುರುತಿನ ಚೀಟಿಗಳನ್ನು ಆಯಾ ಮತದಾರರಿಗೆ ಮರಳಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಜೆಡಿಎಸ್ ಅಧಿನಾಯಕ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತಮ್ಮ ಪಕ್ಷಗಳ ಪ್ರಚಾರದ ಸಾರಥ್ಯ ವಹಿಸಿದ್ದರು. ಬಿಜೆಪಿಯ ತುಳಸಿ ಮುನಿರಾಜು ಗೌಡ, ಕಾಂಗ್ರೆಸ್ ಪಕ್ಷದಿಂದ ಈ ಸ್ಥಾನವನ್ನು ಕಿತ್ತುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ಮಾಜಿ ಕಾರ್ಪೊರೇಟರ್ ಜಿ.ಎಚ್.ರಾಮಚಂದ್ರ ಅವರು ಚುನಾವಣೆ ಘೋಷಣೆಗೆ ಕೆಲವೇ ದಿನ ಮೊದಲು ಜೆಡಿಎಸ್‌ಗೆ ವಲಸೆ ಹೋಗಿ, ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ನೂತನ ಮೈತ್ರಿಕೂಟದ ಅಂಗಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸ್ನೇಹಪರ ಸ್ಪರ್ಧೆ ಏರ್ಪಟ್ಟಿದೆ. ಮೇ 12ರ ಚುನಾವಣೆಗೆ ಮೂರು ದಿನ ಹಿಂದೆ 9,567 ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮತದಾನ ಮುಂದೂಡಲಾಗಿತ್ತು. ಕಾಂಗ್ರೆಸ್‌ನ ಹಾಲಿ ಶಾಸಕ ಎನ್.ಮುನಿರತ್ನ ಅವರು ಈ ಪ್ರಕರಣ ಆರೋಪಿ. ನಾಲ್ವರು ಪಕ್ಷೇತರರು ಸೇರಿದಂತೆ 14 ಮಂದಿ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News