ಮೈತ್ರಿಯ ಭವಿಷ್ಯ ನಿರ್ಧರಿಸಲಿರುವ ಪೂರ್ಣಾವಧಿಯ ಚರ್ಚೆ

Update: 2018-05-29 04:31 GMT

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಒಂದೇ ದೃಷ್ಟಿಯಿಂದ ಈ ಸರಕಾರ ಅಸ್ತಿತ್ವಕ್ಕೆ ಬಂದಿದೆ ಎನ್ನುವುದು ಪೂರ್ತಿ ಸತ್ಯವಲ್ಲ. ಇಲ್ಲಿ ಬಿಜೆಪಿಯನ್ನು ದೂರ ಇಡುವುದರ ಜೊತೆಗೆ ಕಾಂಗ್ರೆಸ್‌ನೊಳಗಿರುವ ಕೆಲವು ಪ್ರಮುಖರಿಗೆ ಸಿದ್ದರಾಮಯ್ಯರನ್ನು ದೂರ ಇಡುವ ಅಜೆಂಡಾವೂ ಇತ್ತು. ಫಲಿತಾಂಶ ಅದಕ್ಕೆ ಪೂರಕವಾಗಿತ್ತು. ಒಂದು ವೇಳೆ ಈ ಮೈತ್ರಿ ನಡೆಯದೇ ಇದ್ದರೆ, ಜೆಡಿಎಸ್ ಬಿಜೆಪಿಯೊಂದಿಗೆ ಅಂತರವನ್ನು ಕಾಯ್ದುಕೊಳ್ಳುತ್ತಿತ್ತೇ? ಈ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಬಿಜೆಪಿಯಿಂದ ಅಂತರ ಕಾಯುವ ಬಗ್ಗೆ ಚುನಾವಣಾ ಪೂರ್ವದಲ್ಲಿ ದೇವೇಗೌಡರು ಹೇಳಿಕೆಯನ್ನು ನೀಡಿದ್ದಾರಾದರೂ, ಅದಕ್ಕೆ ಪೂರ್ಣ ಬೆಂಬಲ ಕುಮಾರ ಸ್ವಾಮಿಯಿಂದ ಹೊರಬಿದ್ದಿರಲಿಲ್ಲ. ಅಂದರೆ ಅವರು ಕಾದು ನೋಡುವ ತಂತ್ರವನ್ನು ಅನುಸರಿಸಿದ್ದರು. ಒಂದು ವೇಳೆ ಜೆಡಿಎಸ್ ಅಂತರವನ್ನು ಕಾಯ್ದುಕೊಂಡರೂ, ಪಕ್ಷವನ್ನು ಒಡೆದಾದರೂ ಬಿಜೆಪಿ ಸರಕಾರವನ್ನು ರಚಿಸುವ ಸಾಧ್ಯತೆಯಿತ್ತು. ಈ ಭಯ ಜೆಡಿಎಸ್‌ಗಿರುವುದರಿಂದ, ಯಾವ ಪಕ್ಷದ ಜೊತೆಗಾದರೂ ಸೇರಿ ಸರಕಾರ ರಚನೆ ಮಾಡಲೇಬೇಕಾದ ಅನಿವಾರ್ಯ ಅದರ ಮುಂದಿತ್ತು. ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳಿದ್ದುದರಿಂದಲೇ ಕಾಂಗ್ರೆಸ್ ತರಾತುರಿಯಿಂದ ಮೈತ್ರಿಗೆ ಒಪ್ಪಿಕೊಂಡಿತು.

ಈ ಆತುರ ಯಾವ ಹಂತಕ್ಕೆ ಹೋಗಿತ್ತೆಂದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿಯನ್ನು ಒಪ್ಪಿಕೊಳ್ಳುವಾಗ, ಅವರು ಪೂರ್ಣಾವಧಿ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆಯೇ ಅಥವಾ ಐದು ವರ್ಷವನ್ನು ಎರಡೂ ಪಕ್ಷಗಳು ಹಂಚಿಕೊಳ್ಳುತ್ತವೆಯೇ ಎನ್ನುವ ಬಗ್ಗೆ ಮಾತುಕತೆಯನ್ನು ಕೂಡ ನಡೆಸಿರಲಿಲ್ಲ. ಇದೀಗ, ಮೈತ್ರಿ ಸರಕಾರ ರಚನೆಯಾಗಿ ಮೂರು ದಿನವೂ ಆಗಿಲ್ಲ, ‘ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿ’ ಹೌದೋ, ಅಲ್ಲವೋ ಎನ್ನುವ ಚರ್ಚೆ ಮುನ್ನೆಲೆಗೆ ಬರುತ್ತಿದೆ. ಇದನ್ನು ಆರಂಭದಲ್ಲೇ ಪರಿಹರಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮೈತ್ರಿಸರಕಾರ ಇದಕ್ಕಾಗಿ ದುಬಾರಿ ಬೆಲೆ ತೆರಲಿದೆ. ಕಾಂಗ್ರೆಸ್ ಅಷ್ಟೊಂದು ಅವಸರದಿಂದ ಜೆಡಿಎಸ್ ಜೊತೆಗೆ ಕೈ ಜೋಡಿಸುವ ಅನಿವಾರ್ಯತೆಯಿತ್ತೇ? ಎನ್ನುವುದು ಮೊದಲ ಪ್ರಶ್ನೆ. ಜೆಡಿಎಸ್ ಬೆಂಬಲದಿಂದ ಒಂದು ವೇಳೆ ಬಿಜೆಪಿ ಸರಕಾರ ರಚನೆ ಮಾಡಿದರೂ, ಮೊದಲಿಗೆ ಮುಖ್ಯಮಂತ್ರಿ ಸ್ಥಾನವನ್ನು ಕುಮಾರಸ್ವಾಮಿಗೆ ನೀಡುತ್ತಿರಲಿಲ್ಲ ಎನ್ನುವುದು ಸತ್ಯ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತವಾದರೆ ಕುಮಾರಸ್ವಾಮಿ ಆದ್ಯತೆಯನ್ನು ಕಾಂಗ್ರೆಸ್‌ಗೇ ನೀಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕಾರಣದಿಂದ ಕಾಂಗ್ರೆಸ್ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಒಪ್ಪಿಕೊಳ್ಳುವಾಗಲೇ ಅವರು ಪೂರ್ಣಾವಧಿ ಮುಖ್ಯಮಂತ್ರಿಯೇ ಅಥವಾ ಎರಡೂವರೆ ವರ್ಷಕ್ಕೆ ಸೀಮಿತವೇ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು.

ಬಿಜೆಪಿ ಅಧಿಕಾರಕ್ಕೇರದಂತೆ ನೋಡಿಕೊಳ್ಳುವುದು ಕಾಂಗ್ರೆಸ್‌ನ ಜವಾಬ್ದಾರಿಯಷ್ಟೇ ಅಲ್ಲ, ಜೆಡಿಎಸ್‌ಗೂ ಆ ಹೊಣೆಗಾರಿಕೆಯಿದೆ ಎನ್ನುವುದನ್ನು ಮನವರಿಕೆ ಮಾಡಿಸಿದ ಬಳಿಕ ಸರಕಾರ ರಚನೆಯ ಮಾತುಕತೆ ಮುಂದುವರಿಸಬೇಕಾಗಿತ್ತು. ಸದ್ಯದ ಫಲಿತಾಂಶ ಡಿಕೆಶಿ, ಪರಮೇಶ್ವರ್ ಅವರನ್ನು ಕಾಂಗ್ರೆಸ್‌ನೊಳಗೆ ಮತ್ತೆ ಅನಿವಾರ್ಯವಾಗಿಸಿತು. ಸಿದ್ದರಾಮಯ್ಯರ ಹಿಡಿತ ಸಡಿಲವಾಗಿ, ಅದು ಡಿಕೆಶಿ ಕೈವಶವಾಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಪರಮೇಶ್ವರ್ ಉಪಮುಖ್ಯಮಂತ್ರಿಯಾಗುವುದನ್ನು ತಡೆಯುವವರು ಯಾರೂ ಇರಲಿಲ್ಲ. ಕುಮಾರಸ್ವಾಮಿಯವರೇನಾದರೂ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡರೆ ಪರಿಸ್ಥಿತಿ ಪರಮೇಶ್ವರ್ ಮತ್ತು ಡಿಕೆಶಿಯ ಕೈಜಾರುತ್ತದೆ. ಆದುದರಿಂದ ಸದ್ಯಕ್ಕೆ ಕಾಂಗ್ರೆಸ್-ಜೆಡಿಎಸ್ ಸರಕಾರ ತುರ್ತಾಗಿ ರಚನೆಯಾಗುವುದು ಕಾಂಗ್ರೆಸ್‌ನ ಈ ನಾಯಕರ ಅಗತ್ಯವಾಗಿತ್ತು. ಸರಕಾರ ರಚನೆಯಾದ ಬಳಿಕ ಇದೀಗ ಕಾಂಗ್ರೆಸ್, ಕುಮಾರಸ್ವಾಮಿಯ ಅಧಿಕಾರಾವಧಿಯ ಕುರಿತಂತೆ ಚರ್ಚೆ ನಡೆಸುತ್ತಿದೆ.

ಈಗಾಗಲೇ ಪರಮೇಶ್ವರ್ ಅವರು ‘‘ಮುಖ್ಯಮಂತ್ರಿ ಪೂರ್ಣಾವಧಿಯೋ ಅಲ್ಲವೋ ಎನ್ನುವುದು ಇತ್ಯರ್ಥವಾಗಿಲ್ಲ’’ ಎಂಬ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಿಗೇ ಕುಮಾರಸ್ವಾಮಿಯವರು ‘‘ನಾನೇ ಪೂರ್ಣಾವಧಿ ಮುಖ್ಯಮಂತ್ರಿ’’ ಎಂಬ ಹೇಳಿಕೆ ನೀಡಿದ್ದಾರೆ. ಇದೀಗ ಸರಕಾರ ರಚನೆಯಾದ ಮೂರನೇ ದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿಲ್ಲಿಯ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿ ‘‘ಪೂರ್ಣಾವಧಿಯ ಕುರಿತಂತೆ ತೀರ್ಮಾನವಾಗಿಲ್ಲ’’ ಎಂದು ಹೇಳಿದ್ದಾರೆ. ಅದರ ಅರ್ಥ, ಕುಮಾರಸ್ವಾಮಿಯವರು ಎರಡೂವರೆ ವರ್ಷ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ಬಳಿಕ ಆ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು. ಸಿದ್ದರಾಮಯ್ಯ ಅವರ ಹೇಳಿಕೆಗೆ ಜೆಡಿಎಸ್ ಜಾಣ ವೌನವನ್ನು ತಾಳಿದೆ. ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಇರುವುದೂ ಒಂದು ಪ್ರತಿಕ್ರಿಯೆಯೇ ಆಗಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

 ಮುಖ್ಯಮಂತ್ರಿಯಾಗಿ ಮೂರು ದಿನವೂ ಆಗಿಲ್ಲ, ಕುಮಾರಸ್ವಾಮಿಯವರು ‘ರಾಜೀನಾಮೆ’ಯ ಪ್ರಸ್ತಾವವನ್ನು ಇಟ್ಟಿದ್ದಾರೆ. ‘‘ನಾನಿಂದು ರಾಜ್ಯದ ಜನತೆಯ ಮುಲಾಜಿನಲ್ಲಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ. ಆದುದರಿಂದ 24 ಗಂಟೆಯಲ್ಲಿ ಸಾಲಮನ್ನಾ ಸಾಧ್ಯವಿಲ್ಲ. ರೈತರು ಕಾಲಾವಕಾಶ ನೀಡಬೇಕು. ಸಾಲಮನ್ನಾ ಸಾಧ್ಯವಾಗದಿದ್ದರೆ ರಾಜೀನಾಮೆಯನ್ನು ನೀಡುತ್ತೇನೆ’’ ಎಂದು ಮಾಧ್ಯಮಗಳಿಗೆ ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ. ಅಂದರೆ ‘ಸಾಲಮನ್ನಾ ಮಾಡಲು ಕಾಂಗ್ರೆಸ್ ವಿರೋಧವಿದೆ’ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಆರೋಪಿಸಿದಂತೆಯೂ ಆಯಿತು. ಇದರ ಜೊತೆಗೆ ‘ಮುಲಾಜು’ ಎನ್ನುವ ಶಬ್ದವೂ ಪ್ರಜಾಸತ್ತೆಗೆ ವಿರುದ್ಧವಾದುದಾಗಿದೆ. ಪರೋಕ್ಷವಾಗಿ, ತನ್ನನ್ನು ಕಾಂಗ್ರೆಸ್ ನಿಯಂತ್ರಿಸುತ್ತಿದೆ ಎಂದು ದೂರಿದಂತೆ ಆಯಿತು. ಮತದಾರರನ್ನೇ ಕುಮಾರಸ್ವಾಮಿ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ‘‘ನೀವು ಬಹುಮತ ನೀಡದೆ ಇದ್ದುದರಿಂದ, ನಾನು ನಿಮಗೆ ಬದ್ಧನಾಗಬೇಕಾಗಿಲ್ಲ’ ಎನ್ನುವ ಧ್ವನಿಯೂ ಇದೆ. ಒಂದು ವೇಳೆ ಅವರ ಪಕ್ಷಕ್ಕೆ ಬಹುಮತ ಸಿಕ್ಕಿದ್ದರೂ ಸಾಲಮನ್ನಾವನ್ನು 24 ಗಂಟೆಯೊಳಗೆ ಮಾಡಲು ಕುಮಾರಸ್ವಾಮಿಗೆ ಸಾಧ್ಯವಿಲ್ಲ ಎನ್ನುವುದು ವಾಸ್ತವ.

ಬಹುಶಃ ಬಹುಮತದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಅರಿವಿದ್ದೇ ಕುಮಾರಸ್ವಾಮಿ ಆ ಭರವಸೆಯನ್ನು ನೀಡಿರಬೇಕು. ಇದೇ ವೇಳೆ, ಇಂದು ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಿರುವುದು ಜನ ಸಾಮಾನ್ಯರ ಬೆಂಬಲದಿಂದಲೇ ಹೊರತು, ಕಾಂಗ್ರೆಸ್‌ನ ಮುಲಾಜಿನಿಂದಲ್ಲ. ಯಾಕೆಂದರೆ ಒಂದು ವೇಳೆ ಶ್ರೀಸಾಮಾನ್ಯರು ಮನಸ್ಸು ಮಾಡಿದ್ದರೆ ಬಿಜೆಪಿಗೆ ಬಹುಮತಕೊಟ್ಟು ಕುಮಾರಸ್ವಾಮಿ ಮುಖ್ಯಮಂತ್ರಿಯಾಗದಂತೆಯೇ ನೋಡಿಕೊಳ್ಳಬಹುದಿತ್ತು. ಇದರ ಜೊತೆಗೆ ಅವರು ಸಾಲಮನ್ನಾ ಸಾಧ್ಯವಾಗದೇ ಇದ್ದರೆ ‘ರಾಜೀನಾಮೆ’ಯ ಬೆದರಿಕೆಯನ್ನೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮೈತ್ರಿ ಸರಕಾರದ ಜೊತೆಗೆ ಬಿರುಕು ಬಂದರೆ, ಅರ್ಧದಲ್ಲೇ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಸನ್ನಿವೇಶ ನಿರ್ಮಾಣವಾದರೆ, ರಾಜೀನಾಮೆ ನೀಡಲು ಒಂದು ‘ಸಕಾರಣ’ವನ್ನು ಈಗಾಗಲೇ ಕುಮಾರಸ್ವಾಮಿ ಹುಡುಕಿಕೊಂಡಿದ್ದಾರೆ. ಈ ರಾಜೀನಾಮೆಯ ಪ್ರಸ್ತಾಪ ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಮಾರಸ್ವಾಮಿ ನೀಡಿರುವ ಎಚ್ಚರಿಕೆಯೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News