ರಾಜ್ಯದ 547 ಪಿಯು ಕಾಲೇಜುಗಳಿಗೆ ಪ್ರಾಚಾರ್ಯರೇ ಇಲ್ಲ!

Update: 2018-05-29 03:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 29: ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ತೀರಾ ಶೋಚನೀಯ. ಇದಕ್ಕೆ ಹಲವು ಕಾರಣಗಳ ಪೈಕಿ ಒಂದು ಕಾರಣ, ರಾಜ್ಯದ 1,229 ಸರ್ಕಾರಿ ಪಿಯು ಕಾಲೇಜುಗಳ ಪೈಕಿ 547 ಕಾಲೇಜುಗಳಿಗೆ ಪ್ರಾಚಾರ್ಯರೇ ಇಲ್ಲದಿರುವುದು. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಬಹುತೇಕ ಪದವಿ ಕಾಲೇಜುಗಳು ಮುಖ್ಯಸ್ಥರಿಲ್ಲದೇ ಅನಾಥವಾಗಿವೆ ಎಂಬ ವರದಿಗಳ ಬೆನ್ನಲ್ಲೇ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಎಪ್ರಿಲ್ 30ರಂದು ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಂದ ಪಡೆದ ಅಂಕಿಅಂಶಗಳಿಂದ ಈ ವಿಚಾರ ಬೆಳಕಿಗೆ ಬಂದಿದೆ. ಇದರ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ಪಿಯು ಇಲಾಖೆ ನಿರ್ದೇಶಕರು, ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಪಿಯು ಕಾಲೇಜುಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಪ್ರಾಚಾರ್ಯರು ಇಲ್ಲದಿರುವುದರಿಂದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಕೂಡಾ ಕಷ್ಟವಾಗುತ್ತಿದೆ ಎಂದು ಪಿಯು ಕಾಲೇಜುಗಳ ಉಪನ್ಯಾಸಕರು ಹೇಳುತ್ತಾರೆ.

ಪ್ರತಿ ಸಣ್ಣ ವಿಷಯಕ್ಕೂ ಶಿಕ್ಷಕರನ್ನು ಸಂಪರ್ಕಿಸಬೇಕು. ಯಾರೊಬ್ಬರೂ ನಿರ್ಧಾರ ಕೈಗೊಳ್ಳುವಂತಿಲ್ಲ. ಎಷ್ಟು ದಿನಗಳ ವರೆಗೆ ಇಲಾಖೆ ಈ ಹುದ್ದೆಗಳನ್ನು ಖಾಲಿ ಇಡುತ್ತದೆ ಎಂದು ಉಪನ್ಯಾಸಕರೊಬ್ಬರು ಪ್ರಶ್ನಿಸುತ್ತಾರೆ.

ಈ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗ್ರಹಿಸಿದ್ದಾರೆ. ಆದರೆ ನೇರ ನೇಮಕಾತಿ ಮೂಲಕ ಈ ಹುದ್ದೆ ಭರ್ತಿ ಮಾಡಬೇಕೇ ಅಥವಾ ಭಡ್ತಿ ಮೂಲಕವೇ ಎನ್ನುವುದು ಸರ್ಕಾರದ ಮುಂದಿರುವ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News