ರಕ್ಷಣೆಗೆ ಆದ್ಯತೆ ನೀಡಿ: ಎಚ್.ಡಿ.ಕುಮಾರಸ್ವಾಮಿ

Update: 2018-06-04 15:11 GMT

ಬೆಂಗಳೂರು, ಜೂ.4: ಮುಂಗಾರು ಮಳೆಯಿಂದಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಹಾ ನಗರಪಾಲಿಕೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಮುಂಗಾರು ಮಳೆ ಆರಂಭವಾಗಿದೆ. ಬಿರುಸಿನ ಗಾಳಿಯ ಜೊತೆಗೆ ಬೀಳುತ್ತಿರುವ ಮಳೆ ಆತಂಕಕಾರಿಯಾಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಇದೆ. ಜನರಿಗೆ ಪ್ರಾಣಾಪಾಯವಾಗದಂತೆ, ರಸ್ತೆಗಳಲ್ಲಿ ಗುಂಡಿ ಬೀಳದಂತೆ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಿ ಎಂದರು.

ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿ ಆತಂಕವಾಗದಂತೆ ಹಾಗೂ ಜನಜೀವನ ಅಸ್ತವ್ಯಸ್ಥವಾಗದಂತೆ ನೋಡಿಕೊಳ್ಳಿ. ಕಾಲುವೆಗಳಲ್ಲಿ, ಮೋರಿಗಳಲ್ಲಿ ನೀರು ನಿಲ್ಲದಂತೆ, ಜೀವಗಳು ಕೊಚ್ಚಿಹೋಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಂದಿಗೂ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಉತ್ತಮ ಸ್ವಚ್ಛತೆಯನ್ನು ಕಾಪಾಡುವುದು ಸರಕಾರದ ಕರ್ತವ್ಯ. ಆದಷ್ಟೂ, ಬೇಗ ಪರಿಸ್ಥಿತಿಯನ್ನು ಉತ್ತಮ ಪಡಿಸುವಂತೆ ಕುಮಾರಸ್ವಾಮಿ ತಿಳಿಸಿದರು.

ಬಳಿಕ ಅಧಿಕಾರಿಗಳು ಮಾತನಾಡಿ, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಈಗಾಗಲೇ ಕೈಗೊಂಡಿದ್ದೇವೆ. ಮಳೆ ಬಿರುಸಾಗುವುದಕ್ಕೆ ಮುನ್ನ ಎಲ್ಲ ಗುಂಡಿಗಳನ್ನು ಯುದ್ಧೋಪಾದಿಯಲ್ಲಿ ಮುಚ್ಚುವುದಾಗಿ ನುಡಿದರು.

ಸಭೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಮಹೇಶ್ವರರಾವ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News