ಮಧುಮೇಹಿಗಳು ಆರೋಗ್ಯಯುತ ರಂಝಾನ್ ಉಪವಾಸ ಆಚರಿಸಲು ಡಾ.ಚಿತ್ರಾ.ಎಸ್. ಅವರ ಸಲಹೆಗಳು

Update: 2018-06-04 15:25 GMT

ಬೆಂಗಳೂರು, ಜೂ.4: ರಂಝಾನ್ ಉಪವಾಸದ ಸಮಯದಲ್ಲಿ ಮಧುಮೇಹವನ್ನು ಹತೋಟಿಯಲ್ಲಿಡಲು ಸೂಕ್ತ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಎಂ.ಎಸ್ ರಾಮಯ್ಯ ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕಿ ಡಾ.ಚಿತ್ರಾ.ಎಸ್. ತಿಳಿಸಿದ್ದಾರೆ.

ಮಧುಮೇಹಿಗಳಿಗೆ ಆಹಾರಕ್ರಮ ಹಾಗೂ ದೈಹಿಕ ಚಟುವಟಿಕೆಯಲ್ಲಿ ಬದಲಾವಣೆಗಳು ಅಗತ್ಯ. ಹೀಗಾಗಿ, ಮುಸ್ಲಿಮರು ಉಪವಾಸದ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಿ, ಔಷಧಿ ಮತ್ತು ಆಹಾರಕ್ರಮ ಬದಲಾವಣೆಗಳ ಕುರಿತು ಸಲಹೆ ಪಡೆಯಬೇಕು. ಜೊತೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ, ವೈದ್ಯರ ನಿರ್ದೇಶನದಂತೆ ಔಷಧಗಳ ಪ್ರಮಾಣ ಬದಲಿಸಿಕೊಂಡು ಆರೋಗ್ಯಯುತವಾಗಿ ರಂಝಾನ್ ಉಪವಾಸ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಅಂಕಿ ಅಂಶಗಳ ಪ್ರಕಾರ 148 ದಶಲಕ್ಷ ಮುಸ್ಲಿಮರು ಮಧುಮೇಹದಿಂದ ಬಳಲುತ್ತಿದ್ದಾರೆ. ಇವರ ಪೈಕಿ ಸುಮಾರು 116 ದಶಲಕ್ಷ ಮಂದಿ ರಂಝಾನ್ ಉಪವಾಸ ಮಾಡುತ್ತಾರೆಂದು ಅಂದಾಜಿಸಲಾಗಿದೆ. ಉಪವಾಸ ಸಮಯದಲ್ಲಿ ಬಾಗುವುದು, ಮಂಡಿಯೂರಿ ಕುಳಿತುಕೊಳ್ಳುವುದು, ಮತ್ತು ಏಳುವುದು ಮುಂತಾದ ಪ್ರಾರ್ಥನಾ ಸಮಯದಲ್ಲಿ ಮಾಡುವ ತರಾವೀಹ್ ದಿನನಿತ್ಯದ ವ್ಯಾಯಾಮ ಚಟುವಟಿಕೆಯಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಉಪವಾಸದಲ್ಲಿ ಆಹಾರ ಕ್ರಮ ಹೀಗಿರಲಿ: ಸಹರಿ ಮತ್ತು ಇಫ್ತಾರ್, ಜೊತೆಗೆ ಅಗತ್ಯವಾದ ಒಂಡೆರಡು ಉತ್ತಮ ಸಮತೋಲನ ಲಘು ಆಹಾರಗಳಿರಲಿ. ಶೇ.45ರಿಂದ 50 ಭಾಗ ಕಾರ್ಬೋಹೈಡ್ರೇಟ್, ಶೇ.20ರಿಂದ 30ಭಾಗ ಪ್ರೊಟೀನ್, ಶೇ.35 ರಷ್ಟು ಕೊಬ್ಬು ಹಾಗೂ ಮಾನೋ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಹೊಂದಿದ ಆಹಾರಗಳಿಗೆ ಆದ್ಯತೆ ನೀಡಿ.

ಉಪವಾಸಕ್ಕೆ ಮುನ್ನ ಮತ್ತು ಉಪವಾಸದ ನಂತರ ಶಕ್ತಿಯನ್ನು ನಿಧಾನವಾಗಿ ಬಿಡುಗಡೆ ಮಾಡುವಂತಹ ಅಧಿಕ ನಾರಿನಂಶ ಇರುವ ಆಹಾರಗಳಾದ ಗ್ರಾನರಿ, ಬ್ರೆಡ್, ಬೀನ್ಸ್, ಅನ್ನ ಸೇರಿದಂತೆ, ಹಣ್ಣು, ತರಕಾರಿ ಮತ್ತು ಸಲಾಡ್‌ಗಳನ್ನು ಹೇರಳವಾಗಿ ಸೇವಿಸಿ. ತುಪ್ಪಬಳಸಿ ತಯಾರಿಸಿದ ಸಮೋಸಾ, ಪಕೋಡದಿಂದ ದೂರವಿರಿ. ಅಗತ್ಯವಿದ್ದಲ್ಲಿ, ಆಲಿವ್ ಎಣ್ಣೆ, ರೇಪ್‌ಸೀಡ್ ಎಣ್ಣೆ ಬಳಸುವುದು ಉತ್ತಮ.

ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನೀರು ಅಥವಾ ಇತರ ಯಾವುದೇ ಆರೋಗ್ಯಕರ ಪಾನೀಯಗಳನ್ನು ಸೇವಿಸುವ ಮೂಲಕ ನೀರಿನಂಶವನ್ನು ಕಾಯ್ದಿಟ್ಟುಕೊಳ್ಳಬಹುದು. ಆದರೆ, ಈ ಸಮಯದಲ್ಲಿ ಕೆಫಿನ್ ಭರಿತವಾದ ಪಾನೀಯಗಳಿಂದ ದೂರವಿರಿ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News