ಕಾಯುವವರೇ ಕೊಂದರೇ?

Update: 2018-06-05 04:06 GMT

ಕಳವುಗೈಯುವುದು ತಪ್ಪು. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೇ. ದನದಂತಹ ಜಾನುವಾರುಗಳನ್ನು ಕದಿಯುವುದಂತೂ ಅತಿ ನೀಚತನದ ಕೆಲಸ. ಯಾಕೆಂದರೆ ಎಲ್ಲ ಸೊತ್ತುಗಳಂತಲ್ಲ ಜಾನುವಾರುಗಳು. ಅದನ್ನು ಸಾಕಿದವರಿಗೆ ಆ ಪ್ರಾಣಿಗಳ ಜೊತೆಗೆ ಭಾವನಾತ್ಮಕ ಸಂಬಂಧಗಳೂ ಇರುತ್ತವೆ. ಗೋವಿನಂತಹ ಪ್ರಾಣಿಗಳನ್ನು ಸಾಕುವವರು ಅದರ ಮೂಲಕವೇ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವ ಸಾಧ್ಯತೆಗಳಿವೆ. ಒಂದು ದನ ಕದ್ದು ಹೋದರೆ ಅದರಿಂದ ಅವರಿಗಾಗುವ ನಷ್ಟ ಅತಿ ದೊಡ್ಡದು. ಕಳೆದ ಒಂದು ದಶಕದಿಂದ ದನಗಳ್ಳತನದ ಬಗ್ಗೆ ಕರಾವಳಿಯಲ್ಲಿ ಸಂಘಪರಿವಾರ ಸಾಕಷ್ಟು ಹುಯಿಲೆಬ್ಬಿಸುತ್ತಿದೆ. ಇದಕ್ಕಾಗಿಯೇ ‘ಗೋರಕ್ಷಕ’ ಪಡೆಯನ್ನೂ ಕಟ್ಟಿಕೊಂಡಿವೆ.

ಆದರೆ ಪೊಲೀಸ್ ಇಲಾಖೆಗೆ ಪರ್ಯಾಯವಾಗಿ ಒಂದು ಪಡೆಯನ್ನು ಕಟ್ಟಿಕೊಳ್ಳುವಷ್ಟು ವ್ಯಾಪಕವಾಗಿ ದನಗಳ್ಳತನ ನಡೆಯುತ್ತಿದೆಯೇ? ದನಗಳ್ಳತನವಾದ ಕುರಿತಂತೆ ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ದೂರುಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ? ವಾಟ್ಸ್ ಆ್ಯಪ್‌ನಲ್ಲಿ, ಸಾಮಾಜಿಕ ತಾಣಗಳಲ್ಲಿ ಸಂಘಪರಿವಾರ ಹರಿಯ ಬಿಡುತ್ತಿರುವ ವದಂತಿಗಳ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಅನ್ವೇಷಣೆ ನಡೆಸಿದಾಗ ಅಂತಹ ಘಟನೆಗಳು ನಡೆದೇ ಇಲ್ಲ ಎಂಬ ಉತ್ತರ ಬರುತ್ತದೆ. ಹಾಗೆಂದು ದನಗಳ್ಳರು ಇಲ್ಲವೇ ಇಲ್ಲ ಎಂದಲ್ಲ. ಕಸಾಯಿಖಾನೆಗೆ ದನಗಳನ್ನು ಅಕ್ರಮವಾಗಿ ಸಾಗಿಸುವ ತಂಡವೇ ಇದೆ. ಎಲ್ಲ ಕಳವುಗಳನ್ನು ಹೇಗೆ ಕಾನೂನು ವ್ಯವಸ್ಥೆ ನಿರ್ವಹಿಸುತ್ತಾ ಬಂದಿದೆಯೋ ಹಾಗೆಯೇ ಇದನ್ನೂ ನಿರ್ವಹಿಸುತ್ತಾ ಬಂದಿದೆೆ. ದನಗಳನ್ನು ಸಾಕುವ ರೈತರು, ನಮಗೆ ಪೊಲೀಸರ ಮೇಲೆ ನಂಬಿಕೆ ಹೋಗಿದೆ ಎಂದು ಗೋರಕ್ಷಕರ ಬಳಿಗೆ ತೆರಳಿದ್ದೂ ಇಲ್ಲ. ಈ ಗೋರಕ್ಷಕರದು ಸ್ವಯಂ ಘೋಷಿತ ಪಡೆಯಾಗಿದೆ. ಒಂದು ರೀತಿಯಲ್ಲಿ ಪೊಲೀಸರಿಗೆ ಪರ್ಯಾಯವಾಗಿ ಸೃಷ್ಟಿಯಾಗಿರುವ ಗೂಂಡಾಗಳ ಪಡೆ. ಗೋರಕ್ಷಣೆ ಇವರಿಗೆ ಒಂದು ನೆಪ ಮಾತ್ರ. ಅದರ ಹೆಸರಿನಲ್ಲಿ ಹಫ್ತಾ ವಸೂಲಿ, ಕೋಮುದ್ವೇಷ ಹರಡುವುದು, ಸಾರ್ವಜನಿಕವಾಗಿ ಗೂಂಡಾಗಿರಿ ನಡೆಸಿ ದರೋಡೆ ಮಾಡುವುದನ್ನು ತಮ್ಮ ವೃತ್ತಿಯಾಗಿ ಅವರು ಮಾಡಿಕೊಂಡು ಬಂದಿದ್ದಾರೆ. ಕಳ್ಳರು ಕಳ್ಳರನ್ನು ಹಿಡಿಯಲು ಸಾಧ್ಯವೆ? ಕಾನೂನು ವ್ಯವಸ್ಥೆಗೆ ಈ ಗೋರಕ್ಷಕ ವೇಷದ ಕಳ್ಳರ ಬಗ್ಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಇವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿದೆ.

ದೇಶದ ಪ್ರಧಾನಮಂತ್ರಿಯಾಗಿರುವ ನರೇಂದ್ರ ಮೋದಿಯವರೇ ಈ ನಕಲಿ ಗೋರಕ್ಷಕರ ಮೇಲೆ ಕಿಡಿ ಕಾರಿದ್ದಾರೆ. ಹಗಲಲ್ಲಿ ಗೋರಕ್ಷಕರ ವೇಷದಲ್ಲಿರುವ ಇವರು ರಾತ್ರಿ ಕ್ರಿಮಿನಲ್ ವ್ಯವಹಾರಗಳನ್ನು ನಡೆಸುತ್ತಾರೆ ಎಂದು ಆರೋಪಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಆದೇಶ ನೀಡಿದ್ದಾರೆ. ಕರ್ನಾಟಕದಲ್ಲಿ ಜಾತ್ಯತೀತ ಸರಕಾರ ಇದ್ದರೂ ನಕಲಿ ಗೋರಕ್ಷಕರಿಗೆ ನಿಯಂತ್ರಣ ಹೇರುವಲ್ಲಿ ವಿಫಲವಾಗಿದೆ. ಈ ವೈಫಲ್ಯಕ್ಕೆ ಕಾರಣ ಸ್ಪಷ್ಟ. ಸಂಘಪರಿವಾರ ಮತ್ತು ಪೊಲೀಸ್ ಇಲಾಖೆಯ ನಡುವಿನ ಅನೈತಿಕ ಸಂಬಂಧವೇ ಇಂತಹ ಬೀದಿ ರೌಡಿಗಳು ಬೆಳೆಯಲು ಮುಖ್ಯ ಕಾರಣ. ಹಿರಿಯಡ್ಕದಲ್ಲಿ ದನದ ವ್ಯಾಪಾರಿಯ ಬರ್ಬರ ಕೊಲೆ ಪ್ರಕರಣ ಇದನ್ನು ಮತ್ತೊಮ್ಮೆ ಜಾಹೀರುಪಡಿಸಿದೆ. ಗುಜರಾತ್, ರಾಜಸ್ಥಾನದಲ್ಲಿ ನಡೆಯುತ್ತಿರುವ ಘಟನೆಗಳು ಇದೀಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸತೊಡಗಿವೆ.

ಮಂಗಳೂರಿನ ಜೋಕಟ್ಟೆಯ ದನದ ವ್ಯಾಪಾರಿಯೊಬ್ಬರು ಇತ್ತೀಚೆಗೆ ನಾಪತ್ತೆಯಾಗಿದ್ದರು. ಪೊಲೀಸರಿಗೆ ದೂರು ನೀಡಿದ ಬಳಿಕ ತನಿಖೆ ನಡೆದು ಅವರ ಮೃತದೇಹ ಪೆರ್ಡೂರು ಸಮೀಪದ ಹಾಡಿಯೊಂದರಲ್ಲಿ ಪತ್ತೆಯಾಗಿತ್ತು. ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಹೇಳಿಕೆ ನೀಡಿದ್ದರು ಮಾತ್ರವಲ್ಲ, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದರಿಂದ ಮರು ತನಿಖೆ ಆರಂಭವಾಯಿತು. ಈ ಮರುತನಿಖೆಯಲ್ಲಿ ಆಘಾತಕಾರಿ ಅಂಶಗಳು ಹೊರಗೆ ಬಂದವು. ಮೃತ ದನದ ವ್ಯಾಪಾರಿಯ ಸಾವು ಸಂಭವಿಸಿರುವುದು ಪೆರ್ಡೂರಿನ ಸಮೀಪದ ಹಾಡಿಯಲ್ಲಲ್ಲ, ಪೊಲೀಸ್ ಠಾಣೆಯಲ್ಲೇ ಅವರ ಸಾವು ಸಂಭವಿಸಿದೆ ಮತ್ತು ಬಳಿಕ ಆ ಮೃತದೇಹವನ್ನು ಪೊಲೀಸ್ ಠಾಣೆಯಿಂದ ಸಂಘಪರಿವಾರ ಕಾರ್ಯಕರ್ತರು ಸಾಗಿಸಿ ಪೆರ್ಡೂರು ಸಮೀಪದ ಕೊತ್ಯಾರು ಎಂಬಲ್ಲಿ ಇಟ್ಟು ಬಂದಿದ್ದರು. ಅಂದರೆ ಈತನ ಸಾವಿನಲ್ಲಿ ಓರ್ವ ಎಸ್ಸೈ ಮತ್ತು ಪೊಲೀಸರು ನೇರವಾಗಿ ಭಾಗಿಯಾಗಿದ್ದರು.

ದನಸಾಗಾಟ ಮಾಡುತ್ತಿದ್ದ್ದಾರೆ ಎಂಬ ವದಂತಿಯ ಮೇರೆಗೆ ಮೇ 30ರಂದು ಪೆರ್ಡೂರು ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಸಂಘಪರಿವಾರದ ಕೆಲ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ. ಕೇಸರಿ ಗೂಂಡಾಗಳನ್ನು ಕಂಡು ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದರು. ಆದರೆ ಹುಸೇನಬ್ಬ ಎಂಬ 62 ವರ್ಷದ ವೃದ್ಧ ಅವರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಹುಸೇನಬ್ಬ ಅವರಿಗೆ ಬರ್ಬರವಾಗಿ ಥಳಿಸಲಾಗಿದೆ. ಬಳಿಕ ಪೊಲೀಸ್ ಜೀಪ್‌ನಲ್ಲೇ ದೇಹವನ್ನು ಠಾಣೆಗೆ ಒಯ್ಯಲಾಗಿದೆ. ಠಾಣೆಯಲ್ಲಿ ಪರೀಕ್ಷೆ ಮಾಡಿದಾಗ ಹುಸೇನಬ್ಬ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಸಂಘಪರಿವಾರ ಕಾರ್ಯಕರ್ತರು ಅಲ್ಲಿಂದ ಸಾಗಿಸಿ ನಾಪತ್ತೆ ನಾಟಕವನ್ನು ಹೆಣೆದಿದ್ದಾರೆ. ಪೊಲೀಸರು ಹುಡುಕಾಡಿದಂತೆ ಮಾಡಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಹೆದರಿ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ದೂರು ದಾಖಲಿಸಿದ್ದಾರೆ. ಗೋರಕ್ಷಕರು ಹಲವರ ಮೇಲೆ ಹಲ್ಲೆ ನಡೆಸಿರುವ ಉದಾಹರಣೆಗಳಿವೆ. ಹಾಗೆಯೇ ಕೊಂದ ಉದಾಹರಣೆಗಳೂ ಇವೆ.

ಉಡುಪಿಯಲ್ಲಿ ದನದ ವ್ಯಾಪಾರಿ ಪ್ರವೀಣ್ ಪೂಜಾರಿ ಎನ್ನುವ ಅಮಾಯಕನನ್ನು ಈ ರಾಕ್ಷಸ ಗುಂಪು ಮೃಗಗಳಂತೆ ಎರಗಿ ಕೊಂದು ಹಾಕಿದವು. ಈ ಸಂದರ್ಭದಲ್ಲೆಲ್ಲ ಪೊಲೀಸ್ ವೈಫಲ್ಯಗಳು ಚರ್ಚೆಯಾಗಿವೆ. ಪೊಲೀಸರ ಸಹಕಾರದಿಂದಲೇ ಇವರು ಜಿಲ್ಲೆಯಲ್ಲಿ ಮೆರೆಯುತ್ತಿದ್ದಾರೆ ಎನ್ನುವ ಆರೋಪಗಳು ತೀವ್ರವಾಗಿ ಕೇಳಿ ಬಂದಿದ್ದವು. ಆದರೆ ಇದೇ ಮೊದಲಬಾರಿಗೆ ಕೊಲೆಯೊಂದರಲ್ಲಿ ಸಂಘಪರಿವಾರದ ಜೊತೆಗೆ ನೇರವಾಗಿ ಶಾಮೀಲಾಗಿ ಪೊಲೀಸರು ಸಿಕ್ಕಿ ಬಿದ್ದಿದ್ದಾರೆ. ಮೃತದೇಹವನ್ನು ಪೊಲೀಸ್ ಠಾಣೆಯಿಂದ ಒಯ್ದು ಹಾಡಿಯಲ್ಲಿ ಎಸೆಯಬೇಕೆಂದರೆ ಸಂಘಪರಿವಾರ ಮತ್ತು ಪೊಲೀಸ್ ಇಲಾಖೆಯ ನಡುವಿನ ನಂಟು ಎಷ್ಟು ಹತ್ತಿರವಿರಬೇಕು? ಹೀಗಿರುವಾಗ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗುವ ಸಂತ್ರಸ್ತರು ಯಾರಿಂದ ನ್ಯಾಯ ನಿರೀಕ್ಷಿಸಬೇಕು? ಹಾಗೆಂದು ಇಡೀ ಪೊಲೀಸ್ ಇಲಾಖೆಯೇ ಕೇಸರೀಕರಣಗೊಂಡಿದೆ ಎಂದು ಅರ್ಥವಲ್ಲ. ಹಾಗೆ ಕೇಸರೀಕರಣಗೊಂಡಿದ್ದರೆ ಎಸ್ಸೈ ಸಹಿತ ಇಬ್ಬರು ಪೊಲೀಸರ ಬಂಧನವೇ ಆಗುತ್ತಿರಲಿಲ್ಲ.

ತಮ್ಮದೇ ಇಲಾಖೆಯ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿ ಅವರನ್ನು ಬಂಧಿಸಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮತ್ತು ಅವರ ಕೆಳ ಅಧಿಕಾರಿಗಳು ಪೊಲೀಸ್ ಇಲಾಖೆಯ ಕಳಂಕವನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಲು ಪ್ರಯತ್ನಿಸಿದ್ದಾರೆ. ಸರಕಾರ ಇವರ ಕರ್ತವ್ಯ ಪ್ರಜ್ಞೆಯನ್ನು ಗುರುತಿಸಿ ಇವರಿಗೆ ಗೌರವ ಸಲ್ಲಿಸಬೇಕಾಗಿದೆ.

ಗೋರಕ್ಷಕರ ವೇಷದಲ್ಲಿರುವ ಹಫ್ತಾ ವಸೂಲಿ ಗುಂಪುಗಳ ಮೇಲೆ ಕಡಿವಾಣ ಹಾಕಬೇಕಾದರೆ ಮೊತ್ತ ಮೊದಲು ಪೊಲೀಸ್ ಇಲಾಖೆಯೊಳಗಿರುವ ಸಂಘಪರಿವಾರ ಮನಸ್ಥಿತಿಯ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಗುರುತಿಸಿ ನಿಯಂತ್ರಿಸಬೇಕಾಗಿದೆ ಎನ್ನುವ ಅಂಶವನ್ನು ಹಿರಿಯಡ್ಕ ಪ್ರಕರಣ ಒತ್ತಿ ಹೇಳಿದೆ. ನೂತನ ಮೈತ್ರಿ ಸರಕಾರವನ್ನು ಸರ್ವ ರೀತಿಯಲ್ಲೂ ಅಭದ್ರಗೊಳಿಸಲು ಸಂಘಪರಿವಾರ ಮತ್ತು ಬಿಜೆಪಿ ಹೊಂಚು ಹಾಕಿ ಕಾಯುತ್ತಿದೆ.

ಕರಾವಳಿಯ ಮೂಲಕವೇ ಅವರು ತಮ್ಮ ಪ್ರಯತ್ನವನ್ನು ಆರಂಭಿಸಬಹುದು. ಕೋಮುಗಲಭೆಗಳನ್ನು ಎಬ್ಬಿಸಿ ಕಾನೂನು ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಮೊದಲ ಪ್ರಯತ್ನದ ಭಾಗವಾಗಿ ಈ ಹತ್ಯೆ ನಡೆದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಹೋಮ, ಹವನಗಳಲ್ಲಿ ಮೈಮರೆತಿರುವ ನೂತನ ಮೈತ್ರಿ ಸರಕಾರ ತಕ್ಷಣ ಕರಾವಳಿಯ ಕಡೆಗೆ ತನ್ನ ಕಣ್ಣು ಹೊರಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News