ಬಿಟ್ ಕಾಯಿನ್ ಹಗರಣ : ಜಾರಿ ನಿರ್ದೇಶನಾಲಯದಿಂದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿಚಾರಣೆ

Update: 2018-06-05 09:26 GMT

ಮುಂಬೈ, ಜೂ. 5: ಅಮಿತ್ ಭಾರದ್ವಾಜ್ ಶಾಮೀಲಾತಿಯ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ರಾಜ್ ಕುಂದ್ರಾ ವಿಚಾರಣೆಗೆ ಸ್ಪಷ್ಟ ಕಾರಣವೇನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ.

ಹಲವಾರು ಹೂಡಿಕೆದಾರರಿಗೆ ಸುಮಾರು 2,000 ಕೋಟಿ ರೂ. ವಂಚನೆಗೈದ ಆರೋಪದ ಮೇಲೆ ಈ ಹಗರಣದ ಪ್ರಮುಖ ಆರೋಪಿ ಗೇಯಿನ್ ಬಿಟ್ ಕಾಯಿನ್ ಸ್ಥಾಪಕ ಅಮಿತ್ ಭಾರದ್ವಾಜ್ ಆವರನ್ನು ಜಾರಿ ನಿರ್ದೇಶನಾಲಯ ಎಪ್ರಿಲ್ ತಿಂಗಳಲ್ಲಿ ಬಂಧಿಸಿತ್ತು. ಆತ ನೀಡಿದ ಮಾಹಿತಿಯನ್ವಯ ತನಿಖಾ ಏಜನ್ಸಿ ಇನ್ನೂ ಹಲವರನ್ನು ಬಂಧಿಸಿತ್ತು. ತಮ್ಮ ಬಿಟ್ ಕಾಯಿನ್ ಸಂಸ್ಥೆಗಳ ಮೂಲಕ ಸಾಕಷ್ಟು ಲಾಭ ನೀಡುವುದಾಗಿ ಅವರು ಆಶ್ವಾಸನೆ ನೀಡಿದ್ದರೆಂದು ಹೇಳಲಾಗಿತ್ತು.

ಇಂತಹ ಒಂದು ಸಮಸ್ಯೆಯಲ್ಲಿ ರಾಜ್ ಕುಂದ್ರಾ ಸಿಕ್ಕಿ ಬೀಳುತ್ತಿರುವುದು ಇದೇ ಮೊದಲ ಬಾರಿಯಲ್ಲ. ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಅವರ ಶಾಮೀಲಾತಿ ರುಜುವಾತಾದ ನಂತರ ಎಲ್ಲಾ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಿಗೆ ಅವರಿಗೆ ನಿಷೇಧ ಹೇರಲಾಗಿತ್ತು. ದಿಲ್ಲಿ ಪೊಲೀಸರು ಅವರಿಗೆ ಈ ನಿಟ್ಟಿನಲ್ಲಿ ಕ್ಲೀನ್ ಚಿಟ್ ನೀಡಿದ ನಂತರ ಅವರು ತಮ್ಮ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News