ವಿಹಿಂಪ, ಬಜರಂಗದಳಕ್ಕೆ ರಾಜೀನಾಮೆ ನೀಡಿದ 13,900 ಕಾರ್ಯಕರ್ತರು

Update: 2018-06-05 10:22 GMT

ಗುವಾಹಟಿ, ಜೂ.5: ಅಸ್ಸಾಂನಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳಕ್ಕೆ ಆಘಾತ ನೀಡುವ ಬೆಳವಣಿಗೆಯೊಂದರಲ್ಲಿ ಎರಡೂ ಸಂಘಟನೆಗಳ ಸುಮಾರು 13,900 ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.

ಎರಡೂ ಸಂಘಟನೆಗಳ ಹಿರಿಯ ನಾಯಕರು ಮೇ 22ರಂದು ಗುವಾಹಟಿಯ ಸುಕ್ರೇಶ್ವರ್ ದೇವಳದಲ್ಲಿ ಸಭೆ ನಡೆಸಿದ ಬಳಿಕ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಮಾಜಿ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಆರಂಭಿಸಲಿರುವ ಹೊಸ ಸಂಘಟನೆ ಸೇರುವ ಉದ್ದೇಶವನ್ನು ಇವರೆಲ್ಲ ಹೊಂದಿದ್ದಾರೆನ್ನಲಾಗಿದೆ.

"ಸಾಕಷ್ಟು ಪ್ರಭಾವ ಹೊಂದಿದ್ದ ಜಿಲ್ಲೆಗಳ ಶೇ.95ರಷ್ಟು ಬಜರಂಗದಳ ಕಾರ್ಯಕರ್ತರು ಹಾಗೂ ಶೇ.80ರಷ್ಟು ವಿಹಿಂಪ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. 11 ಮಂದಿಯ ರಾಜ್ಯ ಸಮಿತಿಯ ಹತ್ತು ಸದಸ್ಯರು ರಾಜೀನಾಮೆ ನೀಡಿದ್ದು ಈಗ ಎರಡೂ ಸಂಘಟನೆಗಳಲ್ಲಿ ಕೆಲವೇ ಕೆಲವು ನೂರು  ಸದಸ್ಯರು ಉಳಿದಿದ್ದಾರೆ" ಎಂದು ಗುವಾಹಟಿ ಬಜರಂಗದಳ ದ ಮಾಜಿ ಅಧ್ಯಕ್ಷ ದೀಪ್ ಜ್ಯೋತಿ ಶರ್ಮ ಹೇಳಿದ್ದಾರೆ.

ವಿಹಿಂಪ ಮತ್ತು ಬಜರಂಗದಳದ ವಿಸ್ತರಣಾ ಯೋಜನೆಯಲ್ಲಿ ಶರ್ಮಾ ಮತ್ತವರ ಸಹವರ್ತಿಗಳು ಪ್ರಮುಖ ಪಾತ್ರ ವಹಿಸಿದ್ದರು, ರಾಜ್ಯದ 33 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಎರಡೂ ಸಂಘಟನೆಗಳು ತಮ್ಮ ಅಸ್ತಿತ್ವನ್ನು ಬೇರೂರಿಸಿದ್ದವು. ನಗೌನ್ ಎಂಬಲ್ಲಿ ಅಪ್ರಾಪ್ತೆಯೊಬ್ಬಳ ಅತ್ಯಾಚಾರ  ಮತ್ತು ಕೊಲೆ ಪ್ರಕರಣದ ನಂತರ ಈ ಸಂಘಟನೆಗಳು ಹಾಗೂ ಕೇಂದ್ರೀಯ ನಾಯಕತ್ವದ ನಡುವೆ ಸಮಸ್ಯೆಗಳು ಸೃಷ್ಟಿಯಾಗಿದ್ದವು.

ಯಾವುದೇ ಹೇಳಿಕೆಗಳನ್ನು ನೀಡದಂತೆ ಯಾ ಪ್ರತಿಭಟನೆಗಳನ್ನು ಆಯೋಜಿಸದಂತೆ ಸೂಚನೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ನಂತರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ 2016ಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿದ್ದವು. ತಿದ್ದುಪಡಿಯನ್ನು ವಿರೋಧಿಸಿ ಬಜರಂಗದಳ ಹಾಗೂ ಪಕ್ಷದ ಕೆಲ ಕಾರ್ಯಕರ್ತರು ಗುವಾಹಟಿಯಲ್ಲಿ ಸಹಿ ಸಂಗ್ರಹ ಚಳುವಳಿಯನ್ನೂ ನಡೆಸಿದ್ದರು. ತಮ್ಮ ಈ ಪಟ್ಟಿಯನ್ನು  ಪಕ್ಷಾಧ್ಯಕ್ಷ ಅಮಿತ್ ಶಾಗೆ ಕಳುಹಿಸಬೇಕೆನ್ನುವಷ್ಟರಲ್ಲಿ  ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಅವರಿಗೆ ತಾಕೀತು ಮಾಡಲಾಗಿತ್ತು.

ಸದ್ಯದ ಮಟ್ಟಿಗೆ ಹೆಚ್ಚಿನ ಬಜರಂಗದಳ ಮತ್ತು ವಿಹಿಂಪ ಕಾರ್ಯಕರ್ತರು ತೊಗಾಡಿಯಾರ ಹೊಸ ಸಂಘಟನೆಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಸಂಘಟನೆ ತಮಗೆ ಸ್ಥಳೀಯ ವಿಚಾರಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ನೀಡುವುದೆಂದು ಅವರು ನಂಬಿದ್ದಾರೆ.

"ತೊಗಾಡಿಯಾ ಅವರು ನಮಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸಲು ಅನುಮತಿಸುತ್ತಾರೆಂದು ನಾವು ನಂಬಿದ್ದೇವೆ'' ಎಂದು ಬಜರಂಗದಳದ ಗುವಾಹಟಿ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ನೀಲವ್ ದಾಸ್ ತಿಳಿಸಿದ್ದಾರೆ.

ಹೊಸ ಸಂಘಟನೆ ಸಮಾಜ ಸೇವೆಗೆ ಹಾಗೂ ದುರಾಡಳಿತದ ವಿರುದ್ಧ ಅಭಿಯಾನಕ್ಕೆ ಒತ್ತು ನೀಡುವುದಾಗಿಯೂ ಕಾರ್ಯಕರ್ತರು ನಂಬಿದ್ದು ನಿಯೋಗವೊಂದು ಈ ತಿಂಗಳಲ್ಲಿ ತೊಗಾಡಿಯಾ ಅವರನ್ನು ಭೇಟಿಯಾಗಲಿದೆ ಎಂಬ ಮಾಹಿತಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News