ಬೆಂಗಳೂರು: ರೌಡಿಶೀಟರ್ ಕಾಲಿಗೆ ಗುಂಡಿಕ್ಕಿ ಬಂಧನ

Update: 2018-06-05 14:36 GMT

ಬೆಂಗಳೂರು, ಜೂ.5: ಗಂಭೀರ ಪ್ರಕರಣ ಆರೋಪದ ಮೇಲೆ ರೌಡಿಶೀಟರ್ ಕಾಲಿಗೆ ಗುಂಡುಹಾರಿಸಿದ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ನಗರದ ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ, ಕಳ್ಳತನ, ಕೊಲೆ ಯತ್ನ, ದೊಂಬಿ ಸೇರಿದಂತೆ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬ್ಯಾಡರಹಳ್ಳಿ ಸಮೀಪದ ತುಂಗಾನಗರ ನಿವಾಸಿ ರೌಡಿಶೀಟರ್ ಶರವಣ ಯಾನೆ ತರುಣ್ ಎಂಬಾತನ ಕಾಲಿಗೆ ಗುಂಡೇಟು ಬಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಮೇ 21ರ ರಾತ್ರಿ 8:45ರ ಸುಮಾರಿಗೆ ಪ್ರವೀಣ್ ಎಂಬುವವರು ಪಟ್ಟೆಗಾರಪಾಳ್ಯದಲ್ಲಿ ಟಿವಿಎಸ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು, ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಜೂ.2 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಲಕ್ಷ ರೂ. ಕಳವು ಮಾಡಲಾಗಿತ್ತು. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್, ಕೃತ್ಯವೆಸಗಿದ ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡವೊಂದನ್ನು ರಚನೆ ಮಾಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಪ್ರದೀಪ್ ಮತ್ತು ಅಕ್ಷಯ್ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳಾದ ಶರವಣ, ನಂದೀಶ ಮತ್ತು ಸುಮಂತ್ ತಪ್ಪು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಮಂಗಳವಾರ ಮುಂಜಾನೆ ಪ್ರಕರಣದ ಪ್ರಮುಖ ಆರೋಪಿ ಶರವಣ, ನಂದೀಶ ಮತ್ತು ಸುಮಂತ್ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ನಗರದ ಸುಮನಹಳ್ಳಿ ವೃತ್ತದಲ್ಲಿ ಹೊಂಚುಹಾಕಿ ಕುಳಿತಿದ್ದರು. ಈ ಸಮಯದಲ್ಲಿ ಪ್ರಮುಖ ಆರೋಪಿ ಶರವಣ ಹಾಗೂ ಇತರರು ಆಟೊದಲ್ಲಿ ಸುಮನಹಳ್ಳಿ ರಿಂಗ್ ರಸ್ತೆಯಿಂದ ಕಾಮಾಕ್ಷಿಪಾಳ್ಯದ ಪೇಟೆ ಚನ್ನಪ್ಪಇಂಡಸ್ಟ್ರಿಯಲ್ ಎಸ್ಟೇಟ್ ಹಿಂಭಾಗದ ನಿರ್ಜನ ಪ್ರದೇಶದತ್ತ ತೆರಳುತ್ತಿದ್ದರು.

ಆರೋಪಿಗಳನ್ನು ಹಿಂಬಾಲಿಸಿದ ಪೊಲೀಸರು ಆಟೊ ಅಡ್ಡಗಟ್ಟಿ ಶರಣಾಗುವಂತೆ ಸೂಚಿಸಿದಾಗ ಅವರು ಪೇದೆ ಶ್ರೀನಿವಾಸಮೂರ್ತಿ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದಾಗ ತಕ್ಷಣ ಎಚ್ಚೆತ್ತುಕೊಂಡ ಎಸ್ಸೈ ನಾಗೇಶ್, ತಮ್ಮ ಸಿಬ್ಬಂದಿಗಳ ಆತ್ಮ ರಕ್ಷಣೆಗಾಗಿ ಆರೋಪಿಗಳನ್ನು ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಆದರೂ, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಆರೋಪಿ ಶರವಣನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಶರವಣನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಗೊಂಡಿರುವ ಪೇದೆ ಶ್ರೀನಿವಾಸಮೂರ್ತಿ ಅವರಿಗೂ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ವಿಶೇಷ ತಂಡದ ಪೊಲೀಸರ ಕಾರ್ಯ ವೈಖರಿಯನ್ನು ಡಿಸಿಪಿ ರವಿ ಡಿ.ಚನ್ನಣ್ಣವರ್ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News