ಕೇಂದ್ರ ಸಚಿವ ನಖ್ವಿ ಹೇಳಿಕೆಗೆ ಬಿಜೆಪಿ, ಆರೆಸ್ಸೆಸ್ ವಿರೋಧ

Update: 2018-06-05 17:35 GMT

ಹೊಸದಿಲ್ಲಿ, ಜೂ.5: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭಿವೃದ್ಧಿ ಮಾತ್ರ ಪ್ರಮುಖ ವಿಷಯವಾಗಲಿದೆ ಹೊರತು, ಹಿಂದುತ್ವ ಅಥವಾ ರಾಮಮಂದಿರವಲ್ಲ ಎನ್ನುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿಕೆಗೆ ಬಿಜೆಪಿ, ಆರೆಸ್ಸೆಸ್ ವಿರೋಧ ವ್ಯಕ್ತಪಡಿಸಿದೆ.

“ಬಿಜೆಪಿ ಅಧಿಕಾರಕ್ಕೇರಿದಂದಿನಿಂದಲೂ ನ್ಯಾಯಾಲಯವು ರಾಮಮಂದಿರ ವಿಚಾರದಲ್ಲಿ ತೀರ್ಪು ನೀಡಲು ದೀರ್ಘ ಸಮಯವನ್ನು ತೆಗೆದುಕೊಂಡಿದೆ. ರಾಮಮಂದಿರ ವಿಚಾರದಲ್ಲಿ ಪ್ರಗತಿಯನ್ನು ಧಾರ್ಮಿಕ ನಾಯಕರು ನಿರೀಕ್ಷಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ರಾಮಮಂದಿರ ವಿಚಾರ ಬಿಜೆಪಿಗೆ ಪ್ರಮುಖವಾಗಿದೆ” ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಹೇಳಿದ್ದಾರೆ.

“2019 ಬಿಜೆಪಿಗೆ ಕಠಿಣವಲ್ಲ. ರಾಮಮಂದಿರ ವಿಚಾರದಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳದೆ ಕೇವಲ ವಿಕಾಸ ಹಾಗು ಅಭಿವೃದ್ಧಿಯಿಂದ ಜಯಿಸಲು ಸಾಧ್ಯವಿಲ್ಲ” ಎಂದವರು ಹೇಳಿದರು.

“ಹಿಂದೂ ಸಮಾಜ, ಸಂತರು, ಪ್ರತಿಯೊಬ್ಬರೂ ರಾಮಮಂದಿರ ನಿರ್ಮಾಣವನ್ನು ಬಯಸುತ್ತಿದ್ದಾರೆ. ಇದು ಚುನಾವಣೆಯ ವಿಷಯವಲ್ಲ. ರಾಮಮಂದಿರ ವಿಚಾರದಲ್ಲಿ ನಾವು ರಾಜಿಯಾಗುವುದಿಲ್ಲ” ಎಂದು ಆರೆಸ್ಸೆಸ್ ಮುಖಂಡ ರಾಕೇಶ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ರಾಮ ಮಂದಿರ ವಿಚಾರದಲ್ಲಿ ನಮ್ಮ ಪಕ್ಷವು ರಾಜಿ ಮಾಡಿಕೊಳ್ಳುವುದಿಲ್ಲ. ನಖ್ವಿ ಇಂತಹ ಹೇಳಿಕೆ ನೀಡಿದ್ದಾರೆಂದು ನನಗೆ ಅನಿಸುತ್ತಿಲ್ಲ. ಅವರು ಬೇರೇನನ್ನೋ ಹೇಳಿರಬೇಕು. ಆ ಭಾಷೆಯಲ್ಲಿ ನಖ್ವಿ ಮಾತನಾಡಿಲ್ಲ ಎಂದು ನನಗನಿಸುತ್ತಿದೆ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News